ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ತಮ್ಮ ಸರ್ಕಾರದ ವಿರುದ್ಧ ವಿಪಕ್ಷಗಳು ಒಟ್ಟಾಗಿ ಬರುತ್ತಿವೆ ಎಂದು ಮಂಗಳವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಸುಳ್ಳು ಆರೋಪಗಳಿಂದ ಅಡ್ಡಿಯಾಗದಂತೆ ಭ್ರಷ್ಟಾಚಾರ ಮಟ್ಟಹಾಕುವುದು ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ವಿಸ್ತರಿತ ಬಿಜೆಪಿ ಪ್ರಧಾನ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಭಾರತದ ಶಕ್ತಿಯು ಹೊಸ ಎತ್ತರಕ್ಕೆ ಏರುತ್ತಿರುವ ಸಮಯದಲ್ಲಿ, ದೇಶದ ಒಳಗೆ ಮತ್ತು ಹೊರಗೆ  ಭಾರತ ವಿರೋಧಿ ಶಕ್ತಿಗಳು ಕೈಜೋಡಿಸುವುದು ಸಹಜ ಎಂದರು.  ಕೆಲವು ಪಕ್ಷಗಳು ಭ್ರಷ್ಟಾಚಾರಿ ಬಚಾವೋ ಅಭಿಯಾನ( ಭ್ರಷ್ಟಾಚಾರ ಉಳಿಸಿ ಅಭಿಯಾನ) ಪ್ರಾರಂಭಿಸಿವೆ ಎಂದು ಹೇಳುವ ಮೂಲಕ ಇಡಿಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಪ್ರತಿಭಟನೆ ನಡೆಸುತ್ತಿರುವ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಗೆ ಅನರ್ಹಗೊಳಿಸಿರುವುದು ಕೂಡ ಪ್ರತಿಪಕ್ಷಗಳಿಗೆ ರ‍್ಯಾಲಿಯ ವಿಷಯವಾಗಿ ಪರಿಣಮಿಸಿದೆ. ಸುಳ್ಳು ಆರೋಪಗಳಿಂದ ದೇಶ ಬಗ್ಗುವುದಿಲ್ಲ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ನಿಲ್ಲುವುದಿಲ್ಲ ಎಂದು ಮೋದಿ ಹೇಳಿದರು.

ಭಾರತ ವಿರೋಧಿ ಶಕ್ತಿಗಳು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿವೆ. ದೇಶದ ಬೆಳವಣಿಗೆಯನ್ನು ತಡೆಯಲು, ಅದರ ಅಡಿಪಾಯದ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳಂತಹ ಸಂಸ್ಥೆಗಳನ್ನು ದೂಷಿಸುವ ಮತ್ತು ಅವರ ವಿಶ್ವಾಸಾರ್ಹತೆಯನ್ನು ನಾಶಮಾಡುವ ಪಿತೂರಿಗಳಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿರುವಾಗ ಅವರನ್ನು ಗುರಿಯಾಗಿಸಲಾಗುತ್ತದೆ ಮತ್ತು ನ್ಯಾಯಾಲಯಗಳು ಈ ಶಕ್ತಿಗಳಿಗೆ ಇಷ್ಟವಾಗದ ತೀರ್ಪು ನೀಡಿದಾಗ ಅವರನ್ನು ಪ್ರಶ್ನಿಸಲಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ನಾವು ಇಷ್ಟೆಲ್ಲಾ ಕ್ರಮಕೈಗೊಳ್ಳುವಾಗ ಕೆಲವರು ಕೋಪಗೊಳ್ಳುವುದು ನಿಶ್ಚಿತ ಎಂದರು.

All those involved in corruption are on the same platform