ಚಿಕ್ಕಮಗಳೂರು: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಾಮಾಣಿಕ ರಾಜಕೀಯವನ್ನು ಹತ್ತಿಕ್ಕುವ ಉದ್ದೇಶದಿಂದ ಪಿಎಂಎಲ್ಎ ಆಕ್ಟನ್ ನ ಸೆಕ್ಷನ್ 45ಕ್ಕೆ ತಿದ್ದುಪಡಿ ತಂದು ವಿರೋಧ ಪಕ್ಷಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದು ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಣ್ಣ ಆರೋಪಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಏನೇ ಮಾಡಿದರು ಭಗವಂತ ಮೇಲಿನಿಂದ ನೋಡುತ್ತಿರುತ್ತಾನೆ. ಇದೇ ಕಾರಣದಿಂದಲೇ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ್ದಾರೆ ಎಂದು ದೂರಿದರು.

ಈ ಬಾರಿ ಬಿಜೆಪಿ ಪಕ್ಷ ರಾಮನ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಮುಂದಾಗಿತ್ತು. ಆದರೆ ರಾಮನ ಜನ್ಮಸ್ಥಳ ಇರುವ ಅಯೋಧ್ಯೆ ಕ್ಷೇತ್ರ, ಸೀತಾಮಾತೆಯ ಸ್ಥಳ ಸೀತಾಪುರ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಸೋಲು ಕಂಡಿದೆ. ಇನ್ನಾದರೂ ದೇವರು ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದನ್ನು ಬಿಜೆಪಿ ಬಿಡಬೇಕು ಎಂದು ಆಗ್ರಹಿಸಿದರು.

ನೀಟ್ ಪರೀಕ್ಷೆಯಲ್ಲಿ ದೊಡ್ಡಮಟ್ಟದ ಹಗರಣ ನಡೆದರೂ 24 ಲಕ್ಷ ಮಕ್ಕಳ ಭವಿಷ್ಯದ ಜೊತೆ ಪ್ರಧಾನಿ ನರೇಂದ್ರ ಮೋದಿ ಆಟವಾಡುತ್ತಿದ್ದಾರೆ. ಈವರೆಗೆ ಪ್ರಧಾನಿ ಕನಿಷ್ಠ ಒಂದು ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 15ರಷ್ಟು ಕೋಟಾದ ಮೆಡಿಕಲ್ ಸೀಟುಗಳನ್ನು ಕೇಂದ್ರಕ್ಕೆ ನೀಡಬೇಕು ಎಂದು ಕಾನೂನು ಜಾರಿ ಮಾಡಲಾಗಿದೆ. ಇದರಿಂದಾಗಿ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ನಮ್ಮ ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಪಡೆಯುವ ಕೇಂದ್ರ ಸರ್ಕಾರ ಐಐಟಿ ಗಳಲ್ಲಿ ಕರ್ನಾಟಕದ ಮಕ್ಕಳಿಗೆ ಏಕೆ ಶೇ. 15 ರಷ್ಟು ಸೀಟು ನೀಡುವುದಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ದರ, ಛಾಪಾ ಕಾಗದದ ದರ ಏರಿಕೆ ಮಾಡಿದೆ. ಇದಲ್ಲದೆ ರೈತರಿಗೆ ಉಚಿತವಾಗಿ ನೀಡಬೇಕಿದ್ದ ಟ್ರಾನ್ಸ್ ಮರ್ ಗಳಿಗೆ ಲಕ್ಷಾಂತರ ರೂ. ದರ ನಿಗದಿ ಮಾಡಲಾಗಿದೆ. ಈ ಮೂಲಕ ಬಡವರು ಹಾಗೂ ರೈತರಿಗೆ ಬರೆ ಎಳೆಯುವ ಕೆಲಸವನ್ನು ಮಾಡುತ್ತಿದೆ. ಯಾವುದೇ ಯೋಜನೆಗಳನ್ನು ಸರಿಯಾಗಿ ನಡೆಸಲು ಆಗುವುದಿಲ್ಲ ಎಂದಾದಲ್ಲಿ ಅವುಗಳನ್ನು ಘೋಷಣೆ ಮಾಡುವ ಅಗತ್ಯವೇನಿತ್ತು ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಫ್ರೀ ನೀಡಿ ಇನ್ನೊಂದು ಕಡೆ ಸುಲಿಗೆ ಮಾಡಲು ಏಕೆ ಯೋಜನೆಗಳನ್ನು ರೂಪಿಸಬೇಕಿತ್ತು ಎಂದು ಪ್ರಶ್ನಿಸಿದ ಅವರು, ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್ ನವರು ಬೀದಿಗೆ ಬಿದ್ದಿದ್ದಾರೆ. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದಾಗಿ ದಿನಬಳಕೆ ವಸ್ತುಗಳು ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಹೀಗಾಗಿ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆ ಸರ್ಕಾರ ಶೇ. 40ರಷ್ಟು ಭ್ರಷ್ಟಾಚಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಅವರೇ ಆರೋಪಿಸುತ್ತಿದ್ದರು. ಈಗ ಅದಕ್ಕಿಂತಲೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನವಿದೆ. ದುಡ್ಡು ಸರ್ಕಾರದ ಖಾತೆಯಿಂದಲೇ ಮಾಯವಾಗುತ್ತಿದೆ. ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗದಿದ್ದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಪಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರೇಗೌಡ, ಪ್ರಮುಖರಾದ ಸುಂದರ ಗೌಡ, ಹೇಮಂತ್ ಕುಮಾರ್, ಮೋಹನ್ ಉಪಸ್ಥಿತರಿದ್ದರು.

BJP-led central government is working to punish the opposition parties