ಬೆಂಗಳೂರು:  ಟಿಪ್ಪು ಸುಲ್ತಾನ್‌ ಸಾವಿನ ಬಗ್ಗೆ ಇತಿಹಾಸಕಾರರು ಸತ್ಯವನ್ನು ಬಯಲಿಗೆಳೆದು ಬಿಜೆಪಿಯ ಸುಳ್ಳನ್ನು ಬೆತ್ತಲೆಗೊಳಿಸಿದ್ದಾರೆ. ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಲು ಸುಳ್ಳು ಪಾತ್ರಗಳನ್ನು ಸೃಷ್ಟಿಸಿದ್ದ ಬಿಜೆಪಿಯವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬ್ರಿಟಿಷರ ಸೇನೆಯು ಟಿಪ್ಪುವನ್ನು ಕೊಂದಿರುವ ಬಗ್ಗೆ ಇತಿಹಾಸಕಾರರು ದಾಖಲೆ ಸಮೇತ ವಿವರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇತಿಹಾಸಕಾರರು ಸತ್ಯವನ್ನು ಬಯಲಿಗೆಳೆದು ಬಿಜೆಪಿಯ ಸುಳ್ಳನ್ನು ಬೆತ್ತಲೆಗೊಳಿಸಿದ್ದಾರೆ. ಬಿಜೆಪಿಯವರು ಚುನಾವಣೆ ಸಮಯದಲ್ಲಿ ಜನರನ್ನು ದಾರಿ ತಪ್ಪಿಸಲು ಉರಿಗೌಡ, ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಹೇಳುತ್ತಿದ್ದರು. ಇವು ಕೇವಲ ಕಾಲ್ಪನಿಕ ಪಾತ್ರಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಾತ್ರಗಳಿಗೆ ಅಶ್ವತ್ಥನಾರಾಯಣ ತಂದೆ, ಸಿ.ಟಿ.ರವಿ ತಾಯಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿವೆ. ಇದು ಈಗಿನ ಇತಿಹಾಸ ಎಂದು ವ್ಯಂಗ್ಯವಾಡಿದರು.

ಇತಿಹಾಸಕಾರರು ನಿಜವಾದ ಇತಿಹಾಸದ ಬಗ್ಗೆ ದಾಖಲೆ ಸಮೇತ ಟಿಪ್ಪುವನ್ನು ಬ್ರಿಟಿಷರ ಸೇನೆ ಕೊಂದಿದೆ ಎಂದು ಹೇಳಿದ್ದಾರೆ. ನಮ್ಮ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್‌ ಅವರು ರಾಜ್ಯ ವಿಧಾನಮಂಡಲದಲ್ಲಿ ಟಿಪ್ಪು ಕುರಿತು ಭಾಷಣ ಮಾಡಿದ್ದಾರೆ. ಉರಿಗೌಡ ಎಂದು ತಿಗಳ ಸಮುದಾಯದಲ್ಲೂ ಇದ್ದಾರೆ, ನಂಜೇಗೌಡ ಎಂದು ಕುರುಬ ಸಮುದಾಯದಲ್ಲೂ ಇದ್ದಾರೆ. ಬಿಜೆಪಿಯವರು ಎಲ್ಲ ಸಮುದಾಯಗಳ ಮಧ್ಯೆ ವಿಷ ಬೀಜ ಬಿತ್ತಲು ಈ ಬಗ್ಗೆ ಸುಳ್ಳು ಹಬ್ಬಿಸಿದ್ದರು. ಇದಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

BJP lies about Tipu exposed by historians