ಚಿಕ್ಕಮಗಳೂರು: ಆತ್ಮಶಕ್ತಿ ಜಾಗೃತಿಯಿಂದ ಯೋಗ್ಯವ್ಯಕ್ತಿ ನಿರ್ಮಾಣಕ್ಕೆ ತ್ರಿಮೂರ್ತಿ ದೇಗುಲ ಸಹಕಾರಿ ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ಆಡಳಿತ ನಿರ್ದೇಶಕ ಡಾ.ಎ.ಚಂದ್ರಶೇಖರ್‌ಉಡುಪ ನುಡಿದರು.

ವಿವೇಕ ಜಾಗೃತಬಳಗ ಗೃಹಮಂಡಳಿ ಮೊದಲಹಂತದ ಬಡಾವಣೆಯಲ್ಲಿ ಒಂದುಕೋಟಿರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ’ತ್ರಿಮೂರ್ತಿದೇಗುಲ’ ಲೋಕಾರ್ಪಣೆಗೊಳಿಸಿ ಇಂದು ಮಾತನಾಡಿದರು.

ದೇಗುಲಗಳ ನಿರ್ಮಾಣ ಸುಲಭ ಆದರೆ ನಿರ್ವಹಣೆ ಕಷ್ಟಕರ. ಸ್ವಚ್ಛತೆ ಮತ್ತು ಶ್ರದ್ಧೆ ಇದ್ದರೆ ದೇಗುಲಗಳು ದೇದೀಪ್ಯಮಾನ ಮತ್ತು ಶೋಭಾನುಮಾನವಾಗಿ ದಾರಿ ತೋರುತ್ತದೆ. ದಿವ್ಯತೆ, ಭವ್ಯತೆಯ ತವರು ದೇಗುಲಗಳು ಆತ್ಮಾನ್ನೋತಿಗೆ ಸಹಕಾರಿ.

ಭಗವಂತನ ಸಾಕ್ಷಾತ್ಕಾರ ತೋರುವ ಜನರ ಬಾಳನ್ನು ಬೆಳಗುವ ಅಂತರಂಗ ಶುದ್ಧಗೊಳಿಸುವ ತಾಣಗಳು. ಭಾರತದೇಶ ಕೋಟ್ಯಾಂತರ ದೇವಾಲಯಗಳ ತೊಟ್ಟಿಲು. ಶಾಸ್ತ್ರೋಕ್ತವಾಗಿ ಭಕ್ತಿಯಿಂದ ಹಾಡಿ ಭಗವಂತನ ಸ್ಥಾಪನೆಯಾಗಿದೆ. ಕಾಣುವುದು ಮೂರುಮಂದಿ ಆದರೂ ಅವರಗಣ ಕೋಟಿ ಎಂದ ಡಾಕ್ಟರ್‌ಜೀ, ಇಲ್ಲಿ ನಿಶ್ಚಿಂತ, ನಿರ್ಲಿಪ್ತರಾಗಿ ಅನುಭವಿಸಬೇಕು, ಆಸ್ವಾದಿಸಬೇಕು. ನಿತ್ಯ ಬೆಳಗ್ಗೆ ಮತ್ತು ಸಂಜೆ ದೇಗುಲಕ್ಕೆ ಬರುವ ಅಭ್ಯಾಸ ಮಾಡಿಕೊಂಡರೆ ೧೧ದಿನಗಳಲ್ಲಿ ಪರಿಣಾಮ ಗೋಚರಿಸುತ್ತದೆ. ದೈವೀಗುಣಮಣಿ ಆಗಲು ಸಾಧ್ಯ ಎಂದರು.

ಸತ್ಯ, ನ್ಯಾಯ, ಧರ್ಮ ದೇಗುಲಗಳ ಹಸಿರು, ಉಸಿರು, ಬಸಿರಾಗಬೇಕು. ಸಾಮಾನ್ಯವಾಗಿ ದೇವಾಲಯಗಳಲ್ಲಿ ಒಳಸುತ್ತು ಮತ್ತು ಹೊರಸುತ್ತು ಇರುತ್ತದೆ. ಆದರೆ ಡಿವೈನ್‌ಪಾರ್ಕ್‌ನ ದೇಗುಲದ ಗರ್ಭಗುಡಿಗೆ ಬಾಗಿಲು ಇರುವುದಿಲ್ಲ. ಎಲ್ಲರೂ ನೇರವಾಗಿ ದೇವರಬಳಿ ಹೋಗಿ ಪ್ರೇಮಭಕ್ತಿ ಮತ್ತು ಭಾವಭಕ್ತಿಯಿಂದ ಮಾತನಾಡಬಹುದು ಎಂದ ಡಾಕ್ಟರ್‌ಉಡುಪ, ದೇಗುಲ ನಿರ್ಮಾಣದಲ್ಲಿ ಹಲವರ ಶ್ರಮವಿದೆ ಎಂದರು.

ಮಾಜಿಸಚಿವರಾದ ಸಿ.ಆರ್.ಸಗೀರಅಹಮ್ಮದ್ ಮತ್ತು ಸಿ.ಟಿ.ರವಿ, ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಸೇರಿದಂತೆ ದೇಗುಲ ನಿರ್ಮಾಣಕ್ಕೆ ನೆರವು ನೀಡಿದವರನ್ನು ಗೌರವಿಸಲಾಯಿತು.

ಎಸ್.ಎಚ್.ಆರ್.ಎಚ್.ವ್ಯವಸ್ಥಾಪಕ ನಿರ್ದೇಶಕ ಡಾ.ವಿವೇಕ್‌ಉಡುಪ ಮಾತನಾಡಿ ದೇವಾಲಯದ ಅಂದ-ಚಂದ-ವಿನ್ಯಾಸ ವಿಶೇಷವಾಗಿದೆ. ಇಲ್ಲಿ ನಿರಂತರವಾಗಿ ಸ್ತುತಿ, ಸ್ತೋತ್ರ ಪಾರಾಯಣ, ಜಪ, ತಪ, ಧ್ಯಾನ, ಭಜನೆ ನಡೆಯುತ್ತಿರಲಿ ಎಂದರು.
ಸಾಧಕಿ ಎನ್.ರುಕ್ಮಿಣಿ ಮಾತನಾಡಿ ಡಿವೈನ್‌ಪಾರ್ಕ್ ಪ್ರೀತಿ ಹಂಚುವ ಸಂಸ್ಥೆ. ಆತ್ಮ ಜಾಗೃತಿ ಕೇಂದ್ರ. ಪಶುತ್ವದಿಂದ ದೈವತ್ವಕೇರುವ ನಿತ್ಯಾನಂದವಾಗಿರುವ ಅವಕಾಶ ದೇಗುಲದಲ್ಲಿದೆ ಎಂದರು.

ತರೀಕೆರೆ ಬಳಗದ ಟಿ.ಎಂ.ಸುನೀತಾ ಏಕಾಗ್ರತೆ ಹೆಚ್ಚಿ, ಸಾಧನಾಶಕ್ತಿ ಹೆಚ್ಚಿಸುವ ದೇಗುಲ ಕುಟುಂಬ-ಊರಿನ ಪ್ರಗತಿಗೆ ಸಿರಿ ಎಂದರು. ಲೀಲಾವತಿ ಸದಾಶಿವ ಮಾತನಾಡಿ ನಮ್ಮೊಳಗಿರುವ ದುರ್ಗುಣಗಳನ್ನು ದೇಗುಲಕ್ಕೆ ಅರ್ಪಿಸಿ ಸಂಚಿತಕರ್ಮ ಬಿಟ್ಟು ಭಗವಂತನ ಸದ್ಗುಣ ಧರಿಸುವ ದಿವ್ಯಾನುಭವ ಇಲ್ಲಿ ಆಗುತ್ತದೆ ಎಂದರು. ಕಡೂರಿನ ಪ್ರೇಮಾಶಂಕರಪ್ಪ ಮಾತನಾಡಿ ನಮ್ಮೊಳಗಿನ ದಿವ್ಯತೆಯನ್ನು ಹೆಚ್ಚಿಸಿಕೊಳ್ಳಲು ಡಾಕ್ಟರ್‌ಜೀ ಅವರ ಮಾರ್ಗದರ್ಶನ ಸಹಕಾರಿ ಎಂದರು.

ವಿವೇಕಜಾಗೃತ ಬಳಗದ ಅಧ್ಯಕ್ಷ ಕೆ.ಬಿ.ನಂಜುಂಡಪ್ಪ ಸ್ವಾಗತಿಸಿ, ಸಾಧಕ ರಾಜೀವ ದೇಗುಲ ನಿರ್ಮಾಣದ ಹಾದಿ ವಿವರಿಸಿ ಮೂಡಿಗೆರೆಯ ಸಾಧಕಿ ಸುಮಿತ್ರಾ ವಂದಿಸಿದರು. ಶೃತಿ ನಿರೂಪಿಸಿದರು.

ಡಾ.ಚಂದ್ರಶೇಖರ್‌ಉಡುಪ ಅವರೊಂದಿಗೆ ಜಯಲಕ್ಷ್ಮೀ ಅಮ್ಮ, ಡಾ.ವಿವೇಕ್‌ಉಡುಪ, ಡಾ.ಮಾನಸಉಡುಪ, ಸಾಲಿಗ್ರಾಮ ಟ್ರಸ್ಟ್‌ನ ಸದಸ್ಯ ಎನ್.ಎಸ್.ಬಾಪಟ್, ಇಂಜಿನಿಯರ್ ಗಣೇಶ್ ಹಾಗೂ ವೇಣುಗೋಪಾಲ, ಶಿವಮೂರ್ತಿ, ಕಟ್ಟಡಸಮಿತಿ ಅಧ್ಯಕ್ಷ ಎನ್.ನಾರಾಯಣ, ನಿ.ಪೂ.ಅಧ್ಯಕ್ಷ ಸಿದ್ಧಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Dedication of ‘Trimurthy Temple’