ಚಿಕ್ಕಮಗಳೂರು:  ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು ರೂ. ೩೭೫ ಕೋಟಿ ವೆಚ್ಚದಲ್ಲಿ ತರೀಕೆರೆ ತಾಲ್ಲೂಕಿನ ಪ್ರತಿ ಮನೆಗಳಿಗೆ ಕುಡಿಯುವ ನೀರು ಹಾಗೂ ಘರ್‌ಘರ್‌ಗಂಗಾ ಯೋಜನೆಯಡಿಯಲ್ಲಿ ಅಜ್ಜಂಪುರ ಭಾಗದಲ್ಲಿ ಸುಮಾರು ರೂ. ೬೬೯ ಕೋಟಿ ವೆಚ್ಚದ ಬೃಹತ್ ಯೋಜನೆಗಳು ಪ್ರಥಮ ಬಾರಿಗೆ ತರೀಕೆರೆಯಲ್ಲಿ ನಡೆಯುತ್ತಿರುವುದು ದೊಡ್ಡ ಕ್ರಾಂತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ತರೀಕೆರೆ ತಾಲ್ಲೂಕಿನ ದೋರನಾಳು ಶಾಲೆಯ ಆವರಣದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕಡಿಯುವ ನೀರು ಯೋಜನೆ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶದಲ್ಲಿ ಕಳೆದ ವರ್ಷದಿಂದ ೭ ಕೋಟಿಗಿಂತಲೂ ಹೆಚ್ಚು ಮನೆಗಳಿಗೆ ಹಾಗೂ ರಾಜ್ಯದಲ್ಲಿ ೩೦ ಲಕ್ಷಕ್ಕಿಂತಲೂ ಹೆಚ್ಚು ಮನೆಗಳಿಗೆ ನೀರು ಪೂರೈಕೆ ಮಾಡಲಾಗಿದ್ದು, ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.  ಒದಗಿಸಲಾಗಿದೆ. ರಾಜ್ಯಸರ್ಕಾರ ಸುಮಾರು ರೂ. ೯ಸಾವಿರ ಕೋಟಿಗಳನ್ನು ಬಜೆಟ್‌ನಲ್ಲಿ ಈ ಯೋಜನೆಗೆ ಮೀಸಲಿರಿಸಿದೆ ಎಂದು ಅವರು ತಿಳಿಸಿದರು.

ತರೀಕೆರೆ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದ ಅವರು, ಎನ್‌ಆರ್‌ಇಜಿನಲ್ಲಿ ಚಿಕ್ಕಮಗಳೂರು ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ  ಕರಂದ್ಲಾಜೆ, ನಗರಾಭಿವೃದ್ಧಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.

Jal Jeevan Mission Scheme