ಚಿಕ್ಕಮಗಳೂರು: ಕನ್ನಡಿಗರು ಸ್ವಾಭಿಮಾನಿಗಳಾಗಿ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಹೊರಬಂದು ನಾಡು-ನುಡಿಯ ರಕ್ಷಣೆಗೆ ಮುಂದಾಗಬೇಕು ಎಂದು ಸಾಹಿತಿ ಪ್ರದೀಪ್ ಕೆಂಜಿಗೆ ಸಲಹೆ ಮಾಡಿದರು.
ನಗರದ ಕುವೆಂಪು ವಿದ್ಯಾನಿಕೇತನ ಐಸಿಎಸ್‌ಇ ಶಾಲೆಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರಿಯಬೇಕಾದರೆ ಆಂಗ್ಲ ಭಾಷೆ ಅಗತ್ಯ. ಆದರೆ, ಅದೇ ನಮ್ಮ ಬದುಕಾಗಬಾರದು ನಾವು ಕನ್ನಡ ತಾಯಿಯ ಮಕ್ಕಳೆಂಬುದನ್ನು ಮರೆಯಬಾರದು ಬದುಕಿಗಾಗಿ ಆಂಗ್ಲ ಭಾಷೆಯನ್ನು ಕಲಿಯಬೇಕು. ದೈನಂದಿನ ವ್ಯವಹಾರಗಳನ್ನು ಮಾತ್ರ ಮಾತೃಭಾಷೆಯಲ್ಲೇ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ನಾಗರಾಜ ರಾವ್ ಕಲ್ಕಟ್ಟೆ ಮಾತನಾಡಿ, ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಮಾತೃಭಾಷೆಯನ್ನು ಮಾತ್ರ ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ವಿದ್ಯಾರ್ಥಿ ಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಮತ್ತು ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಗು ತ್ತಿದೆ ಎಂದು ತಿಳಿಸಿದರು.
ಗಾಯಕ ಎಂ.ಎಸ್.ಸುಧೀರ್ ಅವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಾಲೆಯ ಟ್ರಸ್ಟಿ ಅರ್ಚನಾ ಶಂಕರ್ ಮುಖ್ಯ ಶಿಕ್ಷಕರಾದ ವಿ.ಎಸ್.ರಾಘವೇಂದ್ರ ಹೊನ್ನಾಂಬಿಕೆ ಶೆಮ್ಮಿ ವಿದ್ಯಾರ್ಥಿಗಳಾದ ಗಂಗಾ ಅರಸ್, ಸುನಿಧಿ, ಜೀವಿತ, ಮಾನ್ಯತಾ ಉಪಸ್ಥಿತರಿದ್ದರು.
Kannada Rajyotsa at Kuvempu Vidyaniketan School