ಬೆಳಗಾವಿ:  ಬೆಳಗಾವಿ, ಕಾರವಾರ ಮತ್ತಿತರ ಗಡಿ ಪ್ರದೇಶಗಳ ವಿಚಾರದಲ್ಲಿ ಕರ್ನಾಟಕದ ಜತೆಗೆ ಪದೇ ಪದೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜನ ಶಾಕ್‌ ನೀಡಿದ್ದಾರೆ. ನಮಗೆ ನೀರು ಕೊಡಿ, ಇಲ್ಲಾಂದ್ರೆ ನಾವು ಕರ್ನಾಟಕಕ್ಕೆ ಸೇರಲು ರೆಡಿ ಎಂಬ ಕೂಗೆಬ್ಬಿಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರಕ್ಕೆ ಎಂಟು ದಿನಗಳ ಗಡುವನ್ನೂ ನೀಡಿರುವ ಗ್ರಾಮಸ್ಥರು, ಈ ಗಡುವಿನೊಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ತಾಲೂಕಿಗೆ ಆಹ್ವಾನಿಸುತ್ತೇವೆ, ಕರ್ನಾಟಕ ಸೇರುವ ನಿರ್ಧಾರ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.

ಜತ್ತ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ 42 ಹಳ್ಳಿಗಳ ಜನ ಉಮದಿ ಗ್ರಾಮದಲ್ಲಿ ಶುಕ್ರವಾರ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಲ್ಲದೆ ಅಲ್ಲಿನ ಸರ್ಕಾರಕ್ಕೆ ತೀವ್ರ ಮುಜುಗರವನ್ನೂ ತಂದಿಟ್ಟಿದೆ. ಈ ಹಿಂದೆಯೂ ಜತ್ತ ತಾಲೂಕಿನ ಜನ ನೀರಿನ ಸಮಸ್ಯೆಯಿಂದ ಬೇಸತ್ತು ಕರ್ನಾಟಕ ಸೇರುವ ಠರಾವು ಪಾಸ್‌ ಮಾಡಿ ಸುದ್ದಿಯಾಗಿದ್ದರು.

ಕನ್ನಡಗಿರು ಹೆಚ್ಚಿನ ಸಂಖ್ಯೆಯಲ್ಲಿರುವ ಜತ್ತ ತಾಲೂಕು 6 ದಶಕಗಳಿಂದಲೂ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಇದೀಗ ಕರ್ನಾಟಕ-ಮಹಾರಾಷ್ಟ್ರದ ಗಡಿ ವಿವಾದ ಹಾಗೂ ತಾಲೂಕಿನ ನೀರಿನ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದ ಸಂದರ್ಭದಲ್ಲೇ ಉಮದಿ ಗ್ರಾಮದಲ್ಲಿ ಶುಕ್ರವಾರ ಜತ್ತ ತಾಲೂಕು ನೀರಾವರಿ ಸಂಘರ್ಷ ಸಮಿತಿ ಸಭೆ ನಡೆದಿದೆ. ತಾಲೂಕಿನ 42 ಹಳ್ಳಿಗಳ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ತಡಡರಾತ್ರಿವರೆಗೂ ನಡೆದ ಈ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮವಾಗಿ ಎಂಟು ದಿನಗಳೊಳಗೆ ಮಹಾರಾಷ್ಟ್ರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ತಾಲೂಕಿಗೆ ಬರಬೇಕು. ತಾಲೂಕಿನ ನೀರಿನ ಸಮಸ್ಯೆ ಕುರಿತು ಪರಿಹಾರ ಕಲ್ಪಿಸಬೇಕು. 8 ದಿನಗಳೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ಕರ್ನಾಟಕದ ಮುಖ್ಯಮಂತ್ರಿಯನ್ನು ಜತ್ತ ತಾಲೂಕಿಗೆ ಆಹ್ವಾನಿಸಿ ಕರ್ನಾಟಕ ಸೇರಲು ನಿರ್ಧಾರ ಪ್ರಕಟಿಸುತ್ತೇವೆ ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಈ ವಿಚಾರವಾಗಿ ನಂತರ ಮಾತನಾಡಿದ ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್‌ ಪೋತದಾರ್‌, ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಉಮದಿ ಗ್ರಾಮಕ್ಕೆ ಬಂದು ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳುವ ಕ್ರಮ, ಬಜೆಟ್‌ನಲ್ಲಿ ಇದಕ್ಕಾಗಿ ಮೀಸಲಿಡುವ ಹಣದ ಕುರಿತು ಮಾಹಿತಿ ನೀಡಬೇಕು. ಇಲ್ಲವಾದರೆ ಕರ್ನಾಟಕ ಸಿಎಂರನ್ನು ಉಮದಿಗೆ ಆಹ್ವಾನಿಸುತ್ತೇವೆ. ಕರ್ನಾಟಕ ಸೇರುವ ನಿರ್ಣಯ ಕೈಗೊಳ್ಳುತ್ತೇವೆ. 2012ರಲ್ಲೇ ನಾವು ಕರ್ನಾಟಕ ಸೇರುವ ಠರಾವು ಪ್ರಕಟಿಸಿದ್ದೆವು ಎಂದರು.

Marathi villages to join Karnataka