ಮಂಡ್ಯ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಚಿವ ನಾರಾಯಣಗೌಡರನ್ನು ಆಲಿಬಾಬ ಕಥೆಗೆ ಹೋಲಿಸಿದ ಜೆಡಿಎಸ್‌ ಮುಖಂಡನಿಗೆ ಸಚಿವ ನಾರಾಯಣಗೌಡ ವೇದಿಕೆ ಮೇಲೆಯೇ ತರಾಟೆ ತೆಗೆದುಕೊಂಡಿದ್ದಾರೆ. ಮಂಡ್ಯದ ಕೆಆರ್ ಪೇಟೆ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ, ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಸೇರಿದಂತೆ ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮ ಕೂಡ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಕನ್ನಡ ನಾಡು, ನುಡಿ ಆಚರಣೆ ಆಗಬೇಕಿದ್ದ ವೇದಿಕೆಗೆ ದಿಢೀರ್ ಹೈಡ್ರಾಮಕ್ಕೆ ಸಾಕ್ಷಿಯಾಗಿಬಿಡ್ತು. ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ್ದ ಜೆಡಿಎಸ್‌ ಪುರಸಭಾ ಸದಸ್ಯ ಬಸ್ ಸಂತೋಷ್ ಮಾತಿನುದ್ದಕ್ಕೂ ಸಚಿವ ನಾರಾಯಣಗೌಡ ಅವರನ್ನು ಕುಟುಕಿ ಮಾತನಾಡಲು ಆರಂಭಿಸಿದರು.

ಆಲಿಬಾಬನ ಕಥೆ ಮೂಲಕ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹೋದ ಬಸ್ ಸಂತೋಷ್ ಆಲಿಬಾಬ ಮತ್ತು ಅವನ ಜೊತೆ 40 ಜನ ಕಳ್ಳರು ಎಂಬ ಕಥೆ ಕೇಳಿದ್ದೇವೆ. ಆದ್ರೆ ಕೆ.ಆರ್.ಪೇಟೆಯ ಆಲಿಬಾಬನ ಜೊತೆ 4 ಮಂದಿ ಕಳ್ಳರಷ್ಟೆ ಇದ್ದಾರೆ. ರಾಜ್ಯ ಉದ್ದಾರ ಆಗಬೇಕು ಅಂದ್ರೆ ಭ್ರಷ್ಟಚಾರ ತೊಲಗಬೇಕು ಎಂದು ಪರೋಕ್ಷವಾಗಿ ಸಚಿವ ನಾರಾಯಣಗೌಡರನ್ನ ಆಲಿಬಾಬನಿಗೆ ಹೋಲಿಸಿದ್ರು. ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಸಚಿವ ನಾರಾಯಣಗೌಡ ಕೆಂಡಾಮಂಡಲರಾಗಿ ನಿರೂಪಕಿಯ ಕೈಯಲ್ಲಿದ್ದ ಮೈಕ್ ಕಿತ್ತುಕೊಂಡು ಜೆಡಿಎಸ್‌ ಮುಖಂಡನಿಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಯಾರು ಭ್ರಷ್ಟಚಾರ ಮಾಡಿದ್ದಾರೆ, ಇವನಿಗೆ ಮಾತನಾಡಲು ಅವಕಾಶ ಕೊಟ್ಟವರು ಯಾರು ಎಂದು ಏಕವಚನದಲ್ಲೇ ಪುರಸಭಾ ಸಂತೋಷ್ ಗೆ ಕ್ಲಾಸ್ ತೆಗೆದುಕೊಂಡರು. ಇಬ್ಬರು ನಾಯಕರ  ಹೈಡ್ರಾಮಾ ಕಂಡ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು. ಬಳಿಕ ಮಾತನಾಡಿದ ಟಿಎ ನಾರಾಯಣಗೌಡ ಈ ಕಾರ್ಯಕ್ರಮದ ವೇದಿಕೆ ರಾಜಕೀಯ ಪಕ್ಷದಲ್ಲ ಎಂಬುದು ಅರಿವಿರಲಿ, ನಾಡು ನುಡಿ ಉಳಿವಿಗೆ ರಾಜಕಾರಣಗಳು ಏನು ದಬಾಕಿಲ್ಲ. ನಾಡಿಗಾಗಿ ಯಾವ ಪಕ್ಷದ ನಾಯಕರು ಜೈಲಿಗೆ ಹೋಗಿಲ್ಲ. ಕೇವಲ ಓಲೈಕೆ ರಾಜಕಾರಣ ಮಾಡಿಕೊಂಡು ಕನ್ನಡಿಗರನ್ನ ಮರೆಯುತ್ತಿದ್ದಾರೆ ಎಂದು ರಾಜಕೀಯ ಪಕ್ಷಗಳು, ಪಕ್ಷಗಳ ನಾಯಕರನ್ನ ಟೀಕಿಸಿದ್ರು.

Minister Narayana Gowda