ಆಕ್ಲೆಂಡ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಆಕ್ಲೆಂಡ್ ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿಗ ಭಾರತ ತಂಡ ನಾಯಕ ಶಿಖರ್ ಧವನ್, ಶುಭಮನ್ ಗಿಲ್ ಮತ್ತು ಶ್ರೇಯಸ್ ಅವರ ಅರ್ಧಶತಕಗಳ ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು 307 ರನ್ ಗುರಿ ನೀಡಿತ್ತು.

ಈ ಬೃಹತ್ ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಗೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲಾಥಮ್ ಅದ್ಭುತ ಜೊತೆಯಾಟ ಗೆಲುವಿನ ದಡ ಸೇರಿಸಿತು. ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 309 ರನ್ ಬಾರಿಸಿದೆ. ವಿಲಿಯಮ್ಸನ್ ಅಜೇಯ 94 ಹಾಗೂ ಲಾಥಮ್ ಅಜೇಯ 145 ರನ್ ಬಾರಿಸಿದ್ದಾರೆ. ಇನ್ನುಳಿದಂತೆ ಫಿನ್ ಅಲೆನ್ 22, ಕಾನ್ವೇ 24 ಹಾಗೂ ಮಿಚೆಲ್ 11 ರನ್ ಪೇರಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ನಾಯಕ ಧವನ್ (72 ರನ್) ಮತ್ತು ಶುಭಮನ್ ಗಿಲ್ (50) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 124 ರನ್ ಗಳ ಶತಕದ ಜೊತೆಯಾಟ ನೀಡಿತು. ಈ ಹಂತದಲ್ಲಿ ಧವನ್ ಮತ್ತು ಗಿಲ್ ಆರ್ಧಶತಕ ಸಿಡಿಸಿ ಬೃಹತ್ ಮೊತ್ತದ ಆಸೆ ಚಿಗುರೊಂಡಿಸಿದರು. ಆದರೆ ಅರ್ಧಶತಕ ಸಿಡಿಸಿದ್ದ ಗಿಲ್ ರನ್ನು ಫರ್ಗುಸನ್ ಔಟ್ ಮಾಡಿದರು.

ಬಳಿಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ನಾಯಕ ಧವನ್ ರನ್ನು ಮುಂದಿನ ಓವರ್ ನಲ್ಲೇ ಸೌಥಿ ಪೆವಿಲಯನ್ ಗೆ ಅಟ್ಟಿದರು. ಧವನ್ ಬೆನ್ನಲ್ಲೇ ಪಂತ್ (16) ಮತ್ತು ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಕೇವಲ 4 ರನ್ ಗಳಿಸಿ ಔಟಾಗಿ ತೀವ್ರ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಭಾರತದ ಬೃಹತ್ ಮೊತ್ತದ ಕನಸು ಕಮರುವತ್ತ ಸಾಗಿತು. ಆದರೆ ಮತ್ತೊಂದು ತುದಿಯಲ್ಲಿದ್ದ ಶ್ರೇಯಸ್ ಅಯ್ಯರ್ ನಿಧಾನವಾಗಿ ಲಯ ಕಂಡುಕೊಂಡರು. ಅವರಿಗೆ ಸಂಜು ಸ್ಯಾಮ್ಸನ್ (36 ರನ್) ಮತ್ತು ವಾಷಿಂಗ್ಟನ್ ಸುಂದರ್ (ಅಜೇಯ 37) ಉತ್ತಮ ಸಾಥ್ ನೀಡಿದರು. ಅಯ್ಯರ್ ಕೇವಲ 76 ಎಸೆತಗಲ್ಲಿ 80 ರನ್ ಸಿಡಿಸಿ ಇನ್ನಿಂಗ್ಸ್ ಅಂತಿಮ  ಹಂತದಲ್ಲಿ ಸೌಥಿ ಬೌಲಿಂಗ್ ನಲ್ಲಿ ನಿರ್ಗಮಿಸಿದರು.

ಅದೇ ಕೊನೆಯ ಓವರ್ ನಲ್ಲಿ ಕೊನೆಯ ಎಸೆತದಲ್ಲಿ ಠಾಕೂರ್ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು. ಆ ಮೂಲಕ ಭಾರತ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು 307 ರನ್ ಗುರಿ ನೀಡಿದೆ. ಕಿವೀಸ್ ಪರ ಸೌಥಿ ಮತ್ತು ಫರ್ಗುಸನ್ ತಲಾ 3 ವಿಕೆಟ್ ಪಡೆದರೆ, ಮಿಲ್ನೆ 1 ವಿಕೆಟ್ ಪಡೆದರು.

New Zealand won by 7 wickets: