ಬೆಂಗಳೂರು: ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಹಗರಣ ಆರೋಪ ಬಗ್ಗೆ ಸರ್ಕಾರ ಮುಕ್ತವಾದ ತನಿಖೆ ಮಾಡಿಸುತ್ತದೆ. ಯಾವುದಾದರೂ ಸಂಸ್ಥೆ, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಆರೋಪ ಬಂದರೆ ತನಿಖೆ ಮಾಡಬೇಕೆಂದೇ ನಾವು ಆದೇಶ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೋಟರ್ ಐಡಿ ಹಗರಣ ಸಂಬಂಧ ಈಗಾಗಲೇ ಹಲವರ ವಿರುದ್ಧ ಕ್ರಮ ಕೈಗೊಂಡಿದ್ದು, ಹಲವರನ್ನು ಬಂಧಿಸಿದ್ದೇವೆ. ಇನ್ನೂ ಹಲವು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗುವುದು ಎಂದರು.

ಚುನಾವಣಾ ಆಯೋಗ ಮುಖ್ಯವಾಗಿ ಇಲ್ಲಿ ನೋಡುವುದು, ಮತ್ತೊಮ್ಮೆ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಮಾಡಬೇಕೆಂದು ತೀರ್ಮಾನಿಸಿದ್ದಾರೆ, ಅದು ಸ್ವಾಗತಾರ್ಹ. ಸಂಪೂರ್ಣವಾಗಿ ಮುಕ್ತವಾಗಿ, ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು. ಇಲ್ಲಿ ಮುಖ್ಯವಾಗಿ ಇರುವುದು ಎರಡು ವಿಚಾರ.

ಮತದಾರರ ಹೆಸರು ಅನ್ಯಾಯವಾಗಿ ಪಟ್ಟಿಯಿಂದ ರದ್ದಾಗಿದ್ದರೆ ಮತ್ತೆ ಹಾಕಿ ಸರಿಪಡಿಸುವುದು, ಇನ್ನೊಂದು ಎರಡು-ಮೂರು ಕಡೆ ಮತದಾರರ ಹೆಸರುಗಳಿದ್ದರೆ ಒಂದು ಕಡೆ ಮಾತ್ರ ಇಟ್ಟುಕೊಳ್ಳಬೇಕು. ಎರಡೂ ಕಾರ್ಯಗಳು ಆಗಬೇಕೆಂಬ ಉದ್ದೇಶ ಚುನಾವಣಾ ಆಯೋಗಕ್ಕೆ ಮತ್ತು ಸರ್ಕಾರಕ್ಕಿದೆ ಎಂದರು.

Open probe into voter ID scam allegations