ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಸನ ಕಡೂರು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಇಂದು ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಕಡೂರು ಪಟ್ಟಣದ ಗಣಪತಿ ಮೈದಾನ ನಡೆದ ಅಲ್ಪಸಂಖ್ಯಾತರ ಮುಖಂಡರ ಸಮಾವೇಶದಲ್ಲಿ ಭಾಗಿಯಾಗಿ ಮತಯಾಚನೆ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಧನಂಜಯ್ ಪರ ಮತಯಾಚನೆ ಮಾಡಿ ಪಕ್ಷ ಕ್ಷೇತ್ರದಲ್ಲಿ ಸಧೃಢವಾಗಿದ್ದು ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಕೆಲಸಮಾಡಬೇಕೆಂದು ಕಿವಿಮಾತು ಹೇಳಿದರು. ಇದೇ ಸಮಯದಲ್ಲಿ ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ನೂರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಮುಖಂಡರು ಸೇರ್ಪೆಡೆಗೊಂಡರು. ಅವರಿಗೆ ಪಕ್ಷದ ಶಾಲು ಹೊದಿಸಿ ಸ್ವಾಗತವನ್ನು ಸಂಸದರು ಕೋರಿದರು.

ಹಲವು ದಿನಗಳ ಕಾಲದ ಹಾಸನ ರಾಜಕೀಯದ ಜೆಡಿಎಸ್ ಟಿಕೆಟ್ ಪ್ರಹಸನ ಇನ್ನು ಮುಗಿದಂತೆ ಕಾಣುತ್ತಿಲ್ಲ. 2ನೇ ಪಟ್ಟಿ ಬಿಡುಗಡೆ ಆಗಲಿ. ಆಗ ಎಲ್ಲಾ ಆಚೆ ಬರುತ್ತೆ ಎಂದು ಹೇಳುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಟಿಕೆಟ್ ಗಾಗಿ ಮತ್ತೊಂದು ಸುತ್ತಿನ ಹೋರಾಟ ಇದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅವರು ಇಂದು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಸೇರಿದವರನ್ನ ಪಕ್ಷಕ್ಕೆ ಸ್ವಾಗತಿಸಿಕೊಂಡರು.

ಇದೇ ವೇಳೆ ಮಾತನಾಡಿದ ಅವರು, ಹಾಸನ ಟಿಕೆಟ್ ಬಗ್ಗೆ ಈಗ ಚರ್ಚೆ ಬೇಡ. ನಿನ್ನೆ ದೇವೇಗೌಡರ ಮನೆಗೆ ಹೋಗಿ ಜಿಲ್ಲೆಯ ಎಲ್ಲಾ ವಾಸ್ತವ ಅಂಶಗಳ ಬಗ್ಗೆ ದೇವೇಗೌಡರ ಮುಂದಿಟ್ಟಿದ್ದೇವೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಅಷ್ಟೆ. ಮತ್ತೇನು ಇಲ್ಲ ಅಂದಿದ್ದಾರೆ. 2ನೇ ಪಟ್ಟಿ ಬಿಡುಗಡೆ ಆಗಲಿ ಆಗ ಎಲ್ಲಾ ಆಚೆ ಬರುತ್ತೆ ಎಂದಿದ್ದಾರೆ.

ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿರುದ್ಧವೂ ವಾಗ್ದಾಳಿ ನಡೆಸಿದರು. ಅಲ್ಲಿ ದುಡ್ಡು ಕೊಡೋದು ಕಡಿಮೆಯಾದರೆ ಮತ್ತೆ ಇಲ್ಲಿಗೆ ಓಡಿ ಬರ್ತಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. ನಾನು ಕಡೂರಿಗೆ ಬರ್ತೀನಿ ಅಂದ್ರೆ ಬೇಡ…ಬೇಡ… ನಾನು ಬೆಂಗಳೂರು ಇದ್ದೇನೆ. ದೇವೇಗೌಡರು ಕರೆದಿದ್ದಾರೆ. ಕುಮಾರಣ್ಣ ಕರೆದಿದ್ದಾರೆ. ಪಕ್ಷದ ಕಾರ್ಯಕ್ರಮ, ಭದ್ರಾವತಿಯಲ್ಲಿದ್ದೇನೆ ಎಂದು ಹೇಳುತ್ತಿದ್ದರು. ಮೃತ ಬಾಲಕಿ ರಕ್ಷಿತಾ ಅಂಗಾಂಗ ದಾನ ಮಾಡುವ ವೇಳೆ ನಾನು ಬರ್ತೀನಿ ಅಂದ್ರೆ ಬೇಡ ಅಂತಿದ್ರು. ಆಗ, ನಾನು ಬರ್ತೀನಿ ಅಂದಾಗ ಏಕೆ ಮೂರು ಬಾರಿ ಡೇಟ್ ಬದಲಿಸಿದರು ಎಂದು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಬರ್ತಿದ್ದದ್ದು ರಾಜಕೀಯಕ್ಕೆ ಅಲ್ಲ. ಮೃತ ಬಾಲಕಿಯ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲು.ಆ ಕುಟುಂಬಕ್ಕೆ ಒಂದಷ್ಟು ಧನ ಸಹಾಯ ಮಾಡಲು. ಆದರೆ, ಅದಕ್ಕೂ ಬೇಡ…ಬೇಡ… ಅಂತಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ. ಅವರು ಪಕ್ಷ ಬಿಡೋದು ಮೊದಲೇ ಫಿಕ್ಸ್ ಆಗಿತ್ತು. ಅದೊಂದು ಪ್ರೀ ಪ್ಲ್ಯಾನ್ ಎಂದು ದತ್ತ ಮೇಷ್ಟ್ರು ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

Prajwal Revanna rant against YSV Dutta