ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಬಂಧನಕ್ಕೆ ಬೃಹತ್ ಕಾರ್ಯಾಚರಣೆ ಕೈಗೊಂಡಿರುವ ಪಂಜಾಬ್ ಪೊಲೀಸರ ಕ್ರಮ ವಿರೋಧಿಸಿ ಬ್ರಿಟನ್ ನಲ್ಲಿ ಖಲಿಸ್ತಾನ್ ಹೋರಾಟಗಾರರು ತ್ರಿವರ್ಣ ಧ್ವಜ ಕೆಳಗಿಳಿಸಿ ಪ್ರತಿಭಟನೆ ನಡೆಸಿದ್ದು, ಈ ಕ್ರಮವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಪೊಲೀಸ್ ದಬ್ಬಾಳಿಕೆಯನ್ನು ವಿರೋಧಿಸಿ ಸಿಖ್ಖರ ಒಂದು ವಿಭಾಗವು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿವೆ. ಈ ಕುರಿತು ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಅಂತೆಯೇ ಬ್ರಿಟನ್ ಅಧಿಕಾರಿಗಳ “ಉದಾಸೀನತೆ” ಯನ್ನು ಪ್ರಶ್ನಿಸಿದ ಭಾರತ ಇದು ಸ್ವೀಕಾರಾರ್ಹವಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ.

ವಿದೇಶಾಂಗ ಸಚಿವಾಲಯ ಇಂದು ಸಂಜೆ ನವದೆಹಲಿಯಲ್ಲಿ ಯುಕೆಯ ಹಿರಿಯ ರಾಜತಾಂತ್ರಿಕರನ್ನು ಕರೆಸಿ ಚರ್ಚೆ ನಡೆಸಿದ್ದು, ಕಟುವಾದ ಪದಗಳ ಹೇಳಿಕೆಯಲ್ಲಿ, ಸಚಿವಾಲಯವು ಹೈಕಮಿಷನ್ ಆವರಣದಲ್ಲಿ “ಭದ್ರತೆಯ ಅನುಪಸ್ಥಿತಿಯಲ್ಲಿ” ಪ್ರತಿಭಟನೆಯ ವಿವರಣೆಯನ್ನು ಕೇಳಿದೆ ಮತ್ತು ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಗಳ ಬಗ್ಗೆ ಬ್ರಿಟನ್ ಅಧಿಕಾರಿಗಳ “ಉದಾಸೀನತೆ” “ಸ್ವೀಕಾರಾರ್ಹವಲ್ಲ” ಎಂದು ಬ್ರಿಟನ್ ಸರ್ಕಾರಕ್ಕೆ ಭಾರತ ಹೇಳಿದೆ.

‘ಇಂದಿನ ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಗುರುತಿಸಲು, ಬಂಧಿಸಲು ಮತ್ತು ಕಾನೂನು ಕ್ರಮ ಜರುಗಿಸಲು ಮತ್ತು ಅಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಯುಕೆ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಭಾರತ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಲಂಡನ್ ನಲ್ಲಿರುವ ಭಾರತ ರಾಯಭಾರ ಕಚೇರಿಗೆ ಸಿಖ್ಖರ ಒಂದು ಗುಂಪು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಈ ವೇಳೆ ಕೆಲ ಪ್ರತಿಭಟನಾಕಾರರು ಅಲ್ಲಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಬೆನ್ನಲ್ಲೇ ಘಟನೆ ಕುರಿತು ಭಾರತ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಬ್ರಿಟನ್ ಅಧಿಕಾರಿಗಳ ಭದ್ರತಾಲೋಪದ ಕುರಿತೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Protest for “Khalistan” by lowering the tricolor flag in Britain.