ಚಿಕ್ಕಬಳ್ಳಾಪುರ: ಬಿಜೆಪಿ ಸರ್ಕಾರ ಬಂದ ವೇಳೆಯೇ ಗಡಿ ವಿವಾದ ಬರುತ್ತದೆ. ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿ. ಗಡಿ ವಿಚಾರವಾಗಿ ಹೊರನೋಟಕ್ಕೆ ಅವರು ಕನ್ನಡಿಗರ ಮುಂದೆ ಹೇಳೋದೇ ಬೇರೆ. ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿನಿಲ್ಲುತ್ತಾರೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಜಿಲ್ಲೆಯ ಗೌರಿಬಿದನೂರಲ್ಲಿ ಶನಿವಾರ ಸಂಜೆ ಪಂಚರತ್ನ ರಥಯಾತ್ರೆಯನ್ನುದ್ದೇಶಿಸಿ ಮಾತನಾಡಿ, ನೆರಯ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದ ಜತೆ ಗಡಿ ಗಲಾಟೆ ಇಲ್ಲ. ಈ ರಾಜ್ಯಗಳು ಕರ್ನಾಟಕದ ಜತೆಗೆ ಸೌಹಾರ್ದವಾಗಿ ಬಾಳುತ್ತವೆ. ಮಹಾರಾಷ್ಟ್ರ ಮಾತ್ರ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಾಕ್ಷಣವೇ ಬೆಳಗಾವಿ ನಮ್ಮದು ಅಂತಿದ್ದಾರೆ ಎಂದರು. ದೇಶವನ್ನು ಒಂದು ತತ್ವದಡಿ ಒಂದು ಮಾಡಿರುವ ಸಂವಿಧಾನದ ಜಪ ಮಾಡುತ್ತಲೇ ಬಿಜೆಪಿ ಗಡಿ ವಿಷಯದಲ್ಲಿ ಒಡೆದಾಳುತ್ತಿದೆ.

ನೆಲ, ಜಲದ ಭಾಷೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ನಾವೆಲ್ಲಾ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸಂವಿಧಾನಕ್ಕೆ ಅಪಚಾರ ಮಾಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಬೆಳಗಾವಿ ಜಿಲ್ಲೆಯನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದೇವೆ. ಕಳೆದ 10 ವರ್ಷದಲ್ಲಿ 27 ಸಕ್ಕರೆ ಕಾರ್ಖಾನೆ ಆಗಿದೆ. ವಾಣಿಜ್ಯ ನಗರವಾಗಿದೆ, ಆದಾಯವೂ ಬರುತ್ತಿದೆ. ಇದನ್ನು ಮಹಾರಾಷ್ಟ್ರ ಬಿಜೆಪಿ ಲೂಟಿ ಮಾಡಲು ಹೊರಟಿದೆ. ಆದರೆ ಇದು ಸಾಧ್ಯವಿಲ್ಲ ಎಂದರು.

ಆಘಾತ ತರುತ್ತಿರುವ ಡಬಲ್‌ ಎಂಜಿನ್‌ ಸರ್ಕಾರ: ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಆಘಾತ ತರುವ ರೀತಿ ನಡೆದುಕೊಳ್ಳುತ್ತಿದೆ. ನಾಡಿನ ಸಮಸ್ಯೆಗೆ ಪರಿಹಾರ ಕೊಡುವ ಯಾವುದೇ ನಿರ್ಧಾರವನ್ನು ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಹೀಗಿರುವಾಗ ಡಬಲ್‌ ಇಂಜಿನ್‌ ಸರ್ಕಾರ ಇದ್ದು ಏನು ಪ್ರಯೋಜನ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಜೆಡಿಎಸ್‌ನ ಪಂಚರತ್ನ ಯಾತ್ರೆ ಅಂಗವಾಗಿ ಶಿಡ್ಲಘಟ್ಟತಾಲೂಕಿನ ಸಾದಲಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಬಳಿಕ ಶುಕ್ರವಾರ ಸಾರ್ವಜನಿಕರ ಹಾಗೂ ರೈತರ ಆಹವಾಲು ಆಲಿಸಿ ಅವರು ಮಾತನಾಡಿದರು.

ನಮ್ಮದು ದೆಹಲಿ ಮೂಲದ ಪಕ್ಷ ಅಲ್ಲ, ಕರ್ನಾಟಕದಿಂದ ಅಧಿಕಾರ ಮಾಡುವ ಪಕ್ಷ. ಪಂಚರತ್ನ ಯೋಜನೆಗಳ ಹಿನ್ನೆಲೆ ಬಗ್ಗೆ ನಾವು ಬಹಳ ದೊಡ್ಡಮಟ್ಟದ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದೇವೆ ಎಂದರು. ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಮಹಾರಾಷ್ಟ್ರದವರು ಕೋರ್ಚ್‌ ಮೊರೆ ಹೋಗಿದ್ದಾರೆ. ಇದಕ್ಕೆ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕೈ ಜೋಡಿಸಿದೆ. ಇದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕೂಡ ಭಾಗಿಯಾಗಿದೆ ಅನಿಸುತ್ತಿದೆ. ಬೆಳಗಾವಿ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಿದರೆ ಉಳಿಸೋಕೆ ಸಾಧ್ಯವಿಲ್ಲ ಎಂದು ದೂರಿದರು.

ಶಾಲೆಯ ದು:ಸ್ಥಿತಿ ತೋರಿಸಿದ ವಿದ್ಯಾರ್ಥಿಗಳು: ಶಿಡ್ಲಘಟ್ಟತಾಲೂಕಿನ ತಿಮ್ಮಸಂದ್ರದ ಸರ್ಕಾರಿ ಶಾಲೆಯ ಮಕ್ಕಳು ಕುಮಾರಸ್ವಾಮಿ ಬರುವುದನ್ನು ತಿಳಿದು ರಸ್ತೆಯಲ್ಲಿ ಸಾಲುಗಟ್ಟಿನಿಂತಿದ್ದರು. ಬಳಿಕ ತಮ್ಮ ಶಾಲೆಗೆ ಅವರನ್ನು ಕರೆದುಕೊಂಡು ಹೋಗಿ, ಗೋಡೆಗಳು ಕುಸಿದು ಬಿದ್ದಿರುವುದನ್ನು ತೋರಿಸಿ, ಪಾಠ ಪ್ರವಚನಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಹೇಳಿಕೊಂಡರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು. ಈ ಮಧ್ಯೆ, ಶಾಲೆಗೆ ಆಗಮಿಸಿದ ಕುಮಾರಸ್ವಾಮಿಗೆ ವಿದ್ಯಾರ್ಥಿನಿಯರು ಗುಲಾಬಿ ಹೂ ಕೊಟ್ಟು, ಆರತಿ ಬೆಳಗಿ, ಬರಮಾಡಿಕೊಂಡರು. ಕುಮಾರಸ್ವಾಮಿಯವರು ಆರತಿ ತಟ್ಟೆಗೆ 500 ರು. ನೋಟು ಹಾಕಲು ಯತ್ನಿಸಿದಾಗ ವಿದ್ಯಾರ್ಥಿಗಳು ಬೇಡ ಸಾರ್‌ ಎಂದು ಹಣ ನಿರಾಕರಿಸಿದರು. ಇದು ಸಂಪ್ರದಾಯ ಕಣಮ್ಮ ಎಂದಾಗಲೂ ಕೂಡ ಮಕ್ಕಳು ಹಣ ಸ್ವೀಕರಿಸಲಿಲ್ಲ.

The border clash came when the BJP government came to power.