ಚಿಕ್ಕಮಗಳೂರು: ತಾಲ್ಲೂಕಿನ ಮತ್ತಾವರ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಮೀಸಲಿರಿಸಿದ್ದ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ತಹಶೀಲ್ದಾರ್ ಸುಮಂತ್ ನೇತೃತ್ವದಲ್ಲಿ ಶುಕ್ರವಾರ ಒತ್ತುವರಿ ತೆರವುಗೊಳಿಸಿದರು.

ಮತ್ತಾವರ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ದಂಬದಹಳ್ಳಿಯ ಸರ್ವೆ ನಂಬರ್ 6ರಲ್ಲಿ 3.1 ಎಕರೆ ಜಾಗವನ್ನು ಗುರುತಿಸಿ ಸ್ಮಶಾನಕ್ಕೆ ಮೀಸಲಿಡಲಾಗಿತ್ತು. ಆದರೆ ಗ್ರಾಮದ ಪ್ರಭಾವಿಯೊಬ್ಬರು ಜಾಗವನ್ನು ಒತ್ತುವರಿ ಮಾಡಿ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದರು. ಈ ಹಿನ್ನೆಲೆ ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬಂದ ತಹಶೀಲ್ದಾರ್‌ಗೆ ಜಾಗವನ್ನು ಖುಲ್ಲಾಗೊಳಿಸಿ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಗ್ರಾಮದ ಮುಖಂಡ ಚಿದಾನಂದ್ ಮಾತನಾಡಿ, ಮತ್ತಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಬದಹಳ್ಳಿಯಲ್ಲಿ 18 ಗುಂಟೆ ಜಾಗವನ್ನು ಸ್ಮಶಾನಕ್ಕೆ ಗುರುತಿಸಿ ಉಳಿಕೆ ಜಾಗವನ್ನು ಸಮುದಾಯದ ಏಳಿಗೆಗೆ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಆದರೆ, ಸರ್ಕಾರಿ ಜಾಗವನ್ನು ಪ್ರಭಾವಿಯೊಬ್ಬರು ಒತ್ತುವರಿ ಮಾಡಿಕೊಂಡು ಸಮುದಾಯದ ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದರು. ಹಾಗಾಗಿ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದೇವೆ ಎಂದರು.

ಚಿಕ್ಕಮಗಳೂರು ತಹಶೀಲ್ದಾರ್ ಸುಮಂತ್ ಮಾತನಾಡಿ, ಸ್ಮಶಾನ ಜಾಗಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡುವಂತಿಲ್ಲ. ಅಕ್ರಮವಾಗಿ ಒತ್ತುವರಿ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯ 18 ಗುಂಟೆ ಜಾಗವನ್ನು ಸಮತಟ್ಟು ಮಾಡಲಾಗಿದೆ. ಪಂಚಾಯಿತಿ ವತಿಯಿಂದ ಸುತ್ತಲೂ ಕಲ್ಲುಕಂಬ ಹಾಕುವಂತೆ ಸೂಚಿಸಲಾಗಿದೆ ಎಂದರು.

ಗ್ರಾಮ ಆಡಳಿತಾಧಿಕಾರಿ ಪೂರ್ಣಿಮಾ, ಪಶುಕುಮಾರ್, ಎಂ.ಜೆ. ಉಮೇಶ್, ಗ್ರಾಮಸ್ಥರಾದ ಪ್ರದೀಪ್, ಗುರುಸ್ವಾಮಿ, ಪರಮೇಶ್, ಧರ್ಮೇಶ್, ಮಹೇಶ್, ರಘು, ಯೋಗೀಶ್, ಕುಮಾರ್ ಇದ್ದರು.

Under the leadership of Tehsildar the encroached graveyard is cleared