ಶಾಂತಿನಿಕೇತನ: ವಿಶ್ವಭಾರತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿದ್ಯುತ್ ಚಕ್ರವರ್ತಿ ಅವರ ಕಾರ್ಯವೈಖರಿಯ ವಿರುದ್ಧ ದೂರು ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಘಟಿಕೋತ್ಸವ ಆರಂಭಕ್ಕೆ ಮುನ್ನ ಏಳು ಮಂದಿ ಬೋಧಕ ಸಿಬ್ಬಂದಿಗೆ ಶಿಕ್ಷಣ ಸಂಸ್ಥೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.

ರಾಷ್ಟ್ರಪತಿ ಮುರ್ಮು ಇಂದು ಶಾಂತಿನಿಕೇತನದಲ್ಲಿ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದಕ್ಕೆ ಮುನ್ನ ಏಳು ಮಂದಿ ಪ್ರಾಧ್ಯಾಪಕರು ರಾಷ್ಟ್ರಪತಿಗಳಿಗೆ ಮೇಲ್ ಮೂಲಕ ದೂರು ನೀಡಿದ್ದರು. ದೂರಿನಲ್ಲಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಈ ಸಂಸ್ಥೆಯನ್ನು ಮತ್ತು ಅದರ ಮಧ್ಯಸ್ಥಗಾರರನ್ನು ಉಳಿಸಲು ನಿಮ್ಮನ್ನು ಮನಃಪೂರ್ವಕವಾಗಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ರಾಷ್ಟ್ರಪತಿ ಮತ್ತು ರಾಜ್ಯಪಾಲರನ್ನು ಭೇಟಿಯಾಗದಂತೆ ಮತ್ತು ರಾಷ್ಟ್ರಪತಿ ಕಚೇರಿಗೆ ಸಮಸ್ಯೆಯನ್ನು ತೆಗೆದುಕೊಳ್ಳದಂತೆ ತಡೆಯಲಾಗಿದೆ ಎಂದು ಶೋಕಾಸ್ ನೊಟೀಸ್ ಪಡೆದ ಪ್ರೊಫೆಸರ್ ಒಬ್ಬರು ಆರೋಪಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿ ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಶಿಸ್ತಿನ ಆಧಾರದ ಮೇಲೆ ನಿನ್ನೆ ಸಂಬಂಧಪಟ್ಟ ಪ್ರಾಧ್ಯಾಪಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಳು ಪ್ರಾಧ್ಯಾಪಕರು ಕ್ಯಾಂಪಸ್‌ನಲ್ಲಿ ಅಹಿತಕರ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ. ಸುದೀಪ್ತ ಭಟ್ಟಾಚಾರ್ಯ, ಕೌಸಿಕ್ ಭಟ್ಟಾಚಾರ್ಯ, ತಥಾಗತ ಚೌಧರಿ, ಅರಿಂದಮ್ ಚಕ್ರವರ್ತಿ, ಸಮೀರನ್ ಸಹಾ, ರಾಜೇಶ್ ಕೆ ವಿ ಮತ್ತು ಶರತ್ ಕುಮಾರ್ ಜೆನಾ ಶೋಕಾಸ್ ನೊಟೀಸ್ ಪಡೆದವರಾಗಿದ್ದಾರೆ.

ಏಷ್ಯಾದ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ಟಾಗೋರ್ ಅವರು 1921 ರಲ್ಲಿ ವಿಶ್ವಭಾರತಿ ಸ್ಥಾಪಿಸಿದರು. ಇದನ್ನು 1951 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಯಿತು.

Vishwabharati VV Showcase Notice for 7 Professors