ಚಿಕ್ಕಮಗಳೂರು:  ನಗರಸಭೆ ವತಿಯಿಂದ ಎಂ.ಜಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಟೆಂಡರ್ ಕರೆದಿದ್ದು ಇದರಿಂದಾಗಿ ಹಳೇಯ ಬಾಡಿಗೆದಾರರಿಗೆ ತೊಂದರೆಯಾಗಿದೆ ಎಂದು ನಗರದ ವರ್ತಕರಾದ ದಿಲೀಪ್ ಕುಮಾರ್ ಜೈನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು ಸುಮಾರು ೧೨ ವರ್ಷಗಳ ಹಿಂದೆ ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಬಾಡಿಗೆದಾರರನ್ನು ಅವಧಿಗೆ ಮುಂಚಿತವಾಗಿ ಖಾಲಿ ಮಾಡಿಸಲು ಕ್ರಮ ಕೈಗೊಂಡಾಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು ಎಂದು ಹೇಳಿದರು.

ಈಗ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿದ್ದು ನಂತರ ನಗರಸಭೆ ಪೌರಾಯುಕ್ತರು ಹೊಸ ಮಳಿಗೆ ನಿರ್ಮಾಣವಾದ ಬಳಿಕ ಹಿಂದೆ ಬಾಡಿಗೆ ಇದ್ದವರಿಗೆ ಮಳಿಗೆಗಳನ್ನು ನೀಡುವುದಾಗಿ ಒಪ್ಪಿ ತೀರ್ಮಾನ ಮಾಡಿಕೊಂಡಿದ್ದು, ಈಗ ಹಿಂದಿನ ತೀರ್ಮಾನವನ್ನು ಪರಿಗಣಿಸದೆ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ದೂರಿದರು.

ಹೊಸ ಮಳಿಗೆಗೆ ಟೆಂಡರ್ ಕರೆದಿರುವುದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದ್ದು, ನೂತನ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದಲ್ಲಿ ನೆಲ ಮಾಳಿಗೆಯ ಹತ್ತು ಮಳಿಗೆಗಳನ್ನು ಬಿಟ್ಟು ಟೆಂಡರ್ ಕರೆಯಬೇಕಾತ್ತು. ಇದನ್ನು ಮೀರಿ ಮಳಿಗೆಗಳ ಹರಾಜು ನಡೆಸಿದರೆ ನೆಲ ಮಾಳಿಗೆಯ ೧೦ ಮಳಿಗೆಗಳ ಬಾಡಿಗೆದಾರರಿಗೆ ತೊಂದರೆಯಾಗಲಿದ್ದು ಅದಕ್ಕೆ ಅವಕಾಶವಾಗದಂತೆ ಹಿಂದೆ ಒಪ್ಪಂದವಾದಂತೆ ೧೦ ಮಳಿಗೆಗಳನ್ನು ಬಾಡಿಗೆದಾರರಿಗೆ ನೀಡಬೇಕೆಂದು ಆಗ್ರಹಿಸಿದರು.

ಇದನ್ನು ಮೀರಿ ಟೆಂಡರ್ ಕರೆದು ಬಾಡಿಗೆಗೆ ನೀಡಿದರೆ ನ್ಯಾಯಾಲಯದ ಆದೇಶದಂತೆ ಹೊಸ ಬಾಡಿಗೆದಾರರಿಗೆ ತೊಂದರೆಯಾದರೆ ನಗರಸಭೆಯೇ ಹೊಣೆಯಾಗಬೇಕಾಗುತ್ತದೆ. ತಾವೂ ಜವಾಬ್ದಾರರಲ್ಲ ಈ ಹೊಸ ಮಳಿಗೆ ಹರಾಜಿನಲ್ಲಿ ಯಾರೂ ಕೂಡ ಭಾಗವಹಿಸಬಾರದೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಳೆ ಬಾಡಿಗೆದಾರರಾದ ಮೊಸಿನ್ ಅಕ್ತರ್, ನರಪತ್ ಸಿಂಗ್, ಅಭಿದ್ ಜಮಾಲ್ ಇದ್ದರು.

City council auctions commercial complex in violation of court order