ಚಿಕ್ಕಮಗಳೂರು:  ಕಡೂರು ಪಟ್ಟಣದಲ್ಲಿರುವ ಬಸ್‌ನಿಲ್ದಾಣದ ಉನ್ನತೀಕರಣಕ್ಕೆ ೧೨.೫೦ ಕೋಟಿ ವೆಚ್ಚದ ಡಿಪಿಆರ್ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದುಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲ್ಲೂಕಿನ ಯಗಟಿ ಗ್ರಾಮದಲ್ಲಿ ೭೫ ಲಕ್ಷದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಾರಿಗೆಯ ಬಸ್ ಸಂಪರ್ಕ ರಹಿತ ಗ್ರಾಮಗಳು ಯಾವುದೂ ಇರಬಾರದು ಎಂಬ ಆಶಯ ಹೊಂದಲಾಗಿದೆ ಎಂದರು.

ಪಟ್ಟಣದ ಬಸ್‌ನಿಲ್ದಾಣದ ಜೊತೆಯಲ್ಲಿ ಬೀರೂರು ಪಟ್ಟಣದ ಬಸ್‌ನಿಲ್ದಾಣದ ಪುನಶ್ಚೇತನಕ್ಕಾಗಿ ೨.೫೦ ಕೋಟಿ ವೆಚ್ಚದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎರಡೂ ಕಾರ್ಯಗಳು ನಿಗಮದ ಡಲ್ಟ್ ಸಹಭಾಗಿತ್ವದಲ್ಲಿ ನಡೆಯಲಿದೆ. ಶೀಘ್ರದಲ್ಲೆ ಈ ಕಾಮಗಾರಿಗಳಿಗೆ ಸರ್ಕಾರದ ಮಂಜೂರಾತಿ ದೊರೆಯಲಿದೆ ಎಂದರು.

ತಾಲ್ಲೂಕಿನಲ್ಲಿ ಮುಖ್ಯರಸ್ತೆಯಿಂದ ದೂರವಿರುವ ಗ್ರಾಮಗಳಿಗೆ ಬಸ್ ಹೋಗದೆ ಅಲ್ಲಿನ ಗ್ರಾಮಸ್ಥರು ನಡೆದೇ ಹೋಗುವ ಪರಿಸ್ಥಿತಿ ಇದೆ. ಅಂತಹ ಗ್ರಾಮಗಳಿಗೂ ಬಸ್ ಸಂಪರ್ಕ ನೀಡಲು ಅನುಕೂಲವಾಗುವಂತೆ ಹೊಸ ಬಸ್ ಮಾರ್ಗಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಂಗಟಗೆರೆ, ಅಂತರಘಟ್ಟೆಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಶಾಸಕರ ಅನುದಾನವನ್ನು ಏಳು ಕಡೆ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕಾಗಿ ನೀಡಲಾಗಿದ್ದು, ಇನ್ನೂ ೩೫ ಕಡೆ ಈ ರೀತಿಯ ತಂಗುದಾಣಕ್ಕಾಗಿ ಅನುದಾನ ನೀಡಲಾಗುವುದು. ಯಗಟಿ ಹೋಬಳಿಯ ಸಮಗ್ರ ಅಭಿವೃದ್ದಿಗಾಗಿ ನನ್ನ ಶ್ರಮ ಸದಾ ಇರುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದಪ್ಪ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಈ ಹಿಂದೆ ಒಮ್ಮತದ ನಿರ್ಧಾರದಿಂದ ಸುಮಾರು ೧೪ ಸಾವಿರ ಚದುರ ಅಡಿ ಜಾಗವನ್ನು ಯಾವುದೇ ಹಣ ಪಡೆಯದೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಿದ ಪರಿಣಾಮ ಇಂದು ಸುಸಜ್ಜಿತ ಬಸ್ ನಿಲ್ದಾಣ ಯಗಟಿಗೆ ದೊರೆತಿದೆ ಎಂದು ಸ್ಮರಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆ ನೌಕರರಿಗೆ ಸಂಬಳ ನೀಡಲೂ ಹಣವಿರಲಿಲ್ಲ. ಸಂಸ್ಥೆಯನ್ನು ಲಾಭದತ್ತಲೂ ಕೊಂಡೊಯ್ಯುವ ಕಾರ್ಯ ಮಾಡಲು ಮನಸ್ಥಿತಿ ಹೊಂದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಉಚಿತ ಪ್ರಯಾಣ ಅವಕಾಶ ಕಲ್ಪಿಸಿದ ನಂತರವೂ ಸಾರಿಗೆ ಸಂಸ್ಥೆ ಲಾಭದಲ್ಲಿರುವುದು ವಾಸ್ತವಿಕ ಸತ್ಯ. ೧೨೫೦ ಬಸ್ ಗಳನ್ನು ಹೊಸದಾಗಿ ಖರೀದಿಸಲಾಗಿದೆ. ಅದರಲ್ಲಿ ಕಡೂರು ಕ್ಷೇತ್ರಕ್ಕೂ ನೂತನ ಬಸ್‌ಗಳು ಲಭ್ಯವಾಗಲಿವೆ. ಕಡೂರಿಗೆ ಸಂಬಂಧಿಸಿದಂತೆ ಹೊಸ ಬಸ್ ಗಳನ್ನು ಕಾಯುವುದಕ್ಕಿಂತ ಈಗಿರುವ ೮೪ ಮಾರ್ಗಗಳಲ್ಲಿ ಶೇ ೫೦ ಮಾರ್ಗಗಳನ್ನು ಗ್ರಾಮಾಂತರ ಭಾಗಕ್ಕೆ ಹಾಕಿಕೊಡಬೇಕು ಎಂದು ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ನಿವೃತ್ತ ನೌಕರರನ್ನು ಗೌರವಿಸಲಾಯಿತು. ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶಕುಮಾರ್, ವಿಭಾಗಾಧಿಕಾರಿ ಚೆನ್ನಬಸಪ್ಪ, ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸೈ ರಂಗನಾಥ್, ಬಸ್ ನಿಲ್ದಾಣದ ಸ್ಥಳದಾನಿ ಕುಟುಂಬದ ಚರಣ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಕಲಾವತಿ ವೆಂಕಟೇಶ್, ಉಪಾಧ್ಯಕ್ಷ ಮೂರ್ತಿ, ಸದಸ್ಯರಾದ , ಭಾರತಿ, ಗಾಯಿತ್ರಿ, ಜ್ಯೋತಿ, ಸುನಿಲ್, ಮುಖಂಡರಾದ ದೊಣ್ಣೇಕೋರನಹಳ್ಳಿ ಉಮೇಶ್, ಹೋಚಿಹಳ್ಳಿ ಭೋಗಪ್ಪ ಮತ್ತಿತರಿದ್ದರು.

Inauguration of bus stand costing Rs 75 lakh in Yagati village