ಚಿಕ್ಕಮಗಳೂರು: ಸರ್ಕಾರಿ ಉದ್ಯೋಗದಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದ್ದು ಇದಕ್ಕೆ ದುಃಖಪಡುವ ಅಥವಾ ಸಮಸ್ಯೆ ಬಂದಿದೆ ಎಂದು ವಿಚಲಿತರಾಗುವುದು ಅಗತ್ಯ ಇಲ್ಲ ಎಂದು ನಿವೃತ್ತರಾಗುತ್ತಿರುವ ಮರ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಪರಮೇಶ್ವರ ಅವರು ಅಭಿಪ್ರಾಯಿಸಿದರು.

ಅವರು ಸರ್ಕಾರಿ ಆದೇಶದಂತೆ ನಿವೃತ್ತರಾಗುತ್ತಿರುವುದರಿಂದ ಶಾಲೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿ ಉದ್ಯೋಗದ ಅವಧಿಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಗಳೂ ಸಾರ್ವಜನಿಕರ ಸಹಕಾರ ನೀಡಿದ್ದನ್ನು ಸ್ಮರಿಸಿದ ಅವರು ಪ್ರತಿಭಾ ಕಾರಂಜಿ ಸೇರಿದಂತೆ ನಡೆದ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.

ನನ್ನ ಸೇವಾವಧಿಯಲ್ಲಿ ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೀಡಿದ ಉತ್ತಮ ಸಹಕಾರ ಸ್ಪಂದನೆ ಯಶಸ್ಸಿಗೆ ಕಾರಣ ಎಂದರು.ಮುಂದೆಯೂ ಇದೇ ರೀತಿ ಸಹಕಾರ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತೀರೆಂದು ಭಾವಿಸುತ್ತೇನೆ, ಶಾಲೆಯಲ್ಲಿ ಜರುಗಿದ ಸೂಕ್ಷ್ಮ ಘಟನೆಗಳ ಕುರಿತು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್‌ಗೌಡ ಮಾತನಾಡಿ, ಇಂದು ನಿವೃತ್ತಿ ಹೊಂದುತ್ತಿರುವ ಮುಖ್ಯ ಶಿಕ್ಷಕರು ಪರಮೇಶ್ವರ ಅವರಿಗೆ ಗ್ರಾಮಸ್ಥರು ಹಾಗೂ ಶಾಲೆ ಪರವಾಗಿ ಶುಭ ಹಾರೈಸಿ, ನಿವೃತ್ತರಿಗೆ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಸಹ ಶಿಕ್ಷಕ ಯೋಗೀಶ್ ಮಾತನಾಡಿ, ಇದೇ ಶಾಲೆಯಲ್ಲಿ ಸುದೀರ್ಘ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಮುಖ್ಯ ಶಿಕ್ಷಕ ಪರಮೇಶ್ವರ ಅವರು ಯಾರಿಗೂ ನೋವುಂಟಾಗದಂತೆ ಸೇವೆ ಸಲ್ಲಿಸಿದ್ದಾರೆ. ಸಿಬ್ಬಂದಿಗಳನ್ನು ಸಮಾನವಾಗಿ ಕಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಅವರಿಗೆ ಆಯಸ್ಸು, ಆರೋಗ್ಯ, ನೆಮ್ಮದಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದರು.

ಇವರ ಸೇವಾವಧಿಯಲ್ಲಿ ಶಾಲೆಗೆ ಮೂರು ಹೊಸ ಕಟ್ಟಡಗಳು, ಶೌಚಾಲಯ, ಕಾಂಪೌಂಡು ನಿರ್ಮಾಣ, ಶಾಲಾ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿರುವುದು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಪಾರ್ವತಮ್ಮ, ಸಿ.ವಿ ರಾಧ, ಅಪ್ತಬ್ ಅಹಮದ್ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Marley Government Senior Primary School Head Teacher Parameshwar Farewell Ceremony