ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿದ್ದು ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ಸ್ಪಷ್ಟಪಡಿಸಿದರು.

ಇಂದು ಭೇಟಿಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಐಸಿ, ಲಾರ್ವಾ ಸರ್ವೆ ಮುಂತಾದವುಗಳನ್ನು ಇಲಾಖೆ ಸಿಬ್ಬಂದಿ ಪ್ರತೀ ದಿನ ನಿರ್ವಹಿಸುತ್ತಿದ್ದಾರೆ ಎಂದರು.

ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಚಿಕ್ಕಮಗಳೂರು ನಗರ ಸೇರಿದಂತೆ ಬಯಲು ಭಾಗದಲ್ಲಿ ಮಳೆ ಕಡಿಮೆ ಇದೆ, ಸ್ವಚ್ಚತೆ ಕಾಪಾಡುವುದು ಬಹು ಮುಖ್ಯವಾಗಿದ್ದು, ಡೆಂಗ್ಯೂ ತಡೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸುವಂತೆ ನಾಗರೀಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಮುಂದಿನ ದಿನಗಳಲ್ಲಿ ಇಳಿಮುಖವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈಗ ಸೀತ, ಜ್ವರದ ಪ್ರಕರಣಗಳು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗಿದೆ ಎಂದು ತಿಳಿಸಿದರು.

ಡೆಂಗ್ಯೂ ಪ್ರಕರಣಕ್ಕೆ ಪ್ರತ್ಯೇಕ ವಾರ್ಡ್ ನಿರ್ಮಾಣ ಮಾಡಲಾಗಿದೆ, ಅದನ್ನೇ ನಾವು ಡೆಂಗ್ಯೂ ವಾರ್ಡ್ ಎಂದು ಕರೆಯುತ್ತಿದ್ದೇವೆ. ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿಂದಾಗಿ ಬೇರೆ ಬೇರೆ ಜಿಲ್ಲೆಗಳಿಗೆ ರೋಗಿಗಳು ಹೋಗುತ್ತಿದ್ದಾರೆಂಬ ಬಗ್ಗೆ ಪ್ರಶ್ನಿಸಿದಾಗ ಖಾಸಗಿ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಇಲ್ಲ, ಜೊತೆಗೆ ಅಗತ್ಯ ಔಷಧಗಳ ದಾಸ್ತಾನಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ಎಲ್ಲಾ ರೀತಿಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ನಾಗರೀಕರು ತಮ್ಮ ಮನೆಯ ಸುತ್ತ-ಮುತ್ತ ನೈರ್ಮಲ್ಯ ಕಾಪಾಡುವ ಜೊತೆಗೆ ಕೊಳಚೆ ನೀರು ಸಂಗ್ರಹವಾಗದಂತೆ ಹಾಗೂ ಸೊಳ್ಳೆಗಳ ಬೆಳವಣಿಗೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು.

ನಗರಸಭೆ ವತಿಯಿಂದ ಎಲ್ಲಾ ೩೫ ವಾರ್ಡ್‌ಗಳಲ್ಲಿಯೂ ಚರಂಡಿ ಸ್ವಚ್ಚತೆ, ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಣೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದ ಅವರು ಕಸದ ಗಾಡಿಯಲ್ಲಿ ಡೆಂಗ್ಯೂ ನಿಯಂತ್ರಣ ಕುರಿತ ಅಗತ್ಯ ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದೇವೆ, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ನಾಗರೀಕರು ಕೈಜೋಡಿಸುವಂತೆ ವಿನಂತಿಸಿದರು.

ಜಿಲ್ಲಾ ಉತ್ತಮ ಆರೋಗ್ಯಾಧಿಕಾರಿ ಪ್ರಶಸ್ತಿಗೆ ಭಾಜನ: ಪ್ರತೀ ವರ್ಷದಂತೆ ಈ ವರ್ಷವೂ ಜು.೧ ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸುವ ಅಂಗವಾಗಿ ಈ ಬಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆದ ತಮಗೆ ಉತ್ತಮ ಡಿಹೆಚ್‌ಓ ಪ್ರಶಸ್ತಿ ಲಭಿಸಿದೆ ಎಂದರು.

ಅಂದು ವಿಧಾನಸೌಧದ ಬ್ಯಾಂಕೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತಿತರ ಸಚಿವರು ಪ್ರಶಸ್ತಿ ನೀಡಿ ಗೌರವಿಸಿದ್ದು ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ತಮ್ಮ ಜೊತೆಗೆ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಎಂಬ ಪ್ರಶಸ್ತಿಗೆ ಡಾ. ಸೀಮಾ ಭಾಜನರಾಗಿದ್ದಾರೆ. ಉತ್ತಮ ಮೆಡಿಕಲ್ ಆಫೀಸರ್ ಎಂಬ ಪ್ರಶಸ್ತಿಗೆ ಹಿರೇಮಗಳೂರು ಆಸ್ಪತ್ರೆಯ ಡಾ. ಮನೋಜ್ ಮತ್ತು ಅಂತರಗಟ್ಟೆಯ ಪವಿತ್ರ ರಾಣಿ ಇವರಿಗೆ ಇದೇ ವೇದಿಕೆಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

No death due to dengue fever has occurred in the district