ಚಿಕ್ಕಮಗಳೂರು : ಹೃದಯಾಘಾತದಿಂದ ಅಕಾಲಿಕವಾಗಿ ಮರಣವನ್ನಪ್ಪಿದ್ದು ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕನ್ನಡ ಸೇನೆ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಲಾಯಿತು.

ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ. ರಾಜೇಗೌಡ ಮಾತನಾಡಿ ಕನ್ನಡ ನಾಡಿನ ಅಮೂಲ್ಯ ರತ್ನವನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ಕನ್ನಡ ನಾಡು, ನುಡಿ, ಜಲದ ವಿಚಾರದಲ್ಲಿ ಡಾ. ರಾಜ್‌ಕುಮಾರ್ ಮುಂಚೂಣಿಯಲ್ಲಿದ್ದರು ಅವರ ಆದರ್ಶ, ಗುಣ, ನಡತೆಗಳನ್ನು ಪುನೀತ್ ರಾಜ್‌ಕುಮಾರ್ ಮೈಗೂಡಿಸಿಕೊಂಡಿದ್ದರು. ಇವರ ಅಕಾಲಿಕ ಹೃದಯಾಘಾತದ ಮರಣ ನಿಜಕ್ಕೂ ಕನ್ನಡ ಲೋಕಕ್ಕೆ ತುಂಬಲಾರದ ನಷ್ಟ ಅವರ ಕುಟುಂಬಕ್ಕೆ ದೇವರು ದುಃಖ ಬರುವ ಶಕ್ತಿ ನೀಡಲಿ ಅಂತಾ ಸಂತಾಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಹುತೇಕ ರಾಜಕಾರಣಿಗಳು ಕೋಟ್ಯಾಂತರ ಆಸ್ತಿ, ಹಣ ಗಳಿಸಿದ್ದರು ಸಮಾಜ ಸೇವೆ ಮಾಡುವಲ್ಲಿ ಹಿಂದೇಟು ಹಾಕುತ್ತಾರೆ, ಆದರೆ ಪುನೀತ್ ರಾಜ್‌ಕುಮಾರ್ ಅವರು ವೃದ್ಧಾಶ್ರಮ, ಅನಾಥಶ್ರಮ, ಗೋಶಾಲೆ, ಬಡಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ಶೋಕ ತಂದಿದೆ ಎಂದರು.

ಅತಿ ಚಿಕ್ಕ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಿದವರು. ಬಾಲ ನಟನಾಗಿ ರಾಷ್ಟಪ್ರಶಸ್ತಿ ಪಡೆದವರು, ಯಾವುದೇ ಜಾತಿ, ಮತ ಪಂಥವಿಲ್ಲದೇ ಎಲ್ಲರೂ ಅವರು ಅಭಿಮಾನಿಗಳಾಗಿದ್ದರು ಅಂತಾ ಸ್ಮರಣೆ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆ ಉಪಾಧ್ಯಕ್ಷ ಶಂಕರೇಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ರೂಬೆನ್‌ಮೊಸಸ್, ಮಂಜುನಾಥ್, ಇಂದ್ರೇಶ್, ಕಳವಾಸೆ ರವಿ, ಹಲಸುಬಾಳು ಶಂಕರೇಗೌಡ, ಮಂಜುದಾನಿಹಳ್ಳಿ, ಸಂದೇಶ್, ಶ್ರೀಕಂಠ, ಹೇಮಂತ್, ಅಣ್ಣಯ್ಯ, ಟೋನಿ, ಷಹಬುದ್ದೀನ್ ಸೇರಿದಂತೆ ಮತ್ತಿತರರು ಇದ್ದರು .