ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಮೂರು ವಾರಗಳ ಹಿಂದೆ ಕಾಣಿಸಿಕೊಂಡ ಓಮಿಕ್ರಾನ್‌ ಪ್ರಭೇದದ ಕೊರೊನಾ ಸೋಂಕು ದೇಶದಲ್ಲಿ ದ್ವಿಗುಣವಾಗಿದ್ದು, ಜಾಗತಿಕವಾಗಿ ಆತಂಕ ಹೆಚ್ಚಿಸಿದೆ. ದೇಶದ ಗಡಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಟೆಸ್ಟ್ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಮಧ್ಯೆ, ಓಮಿಕ್ರಾನ್‌ ಪ್ರಭೇದವು 24 ದೇಶಗಳಳ ಜೊತೆಗೆ ಭಾರತವನ್ನೂ ಸೇರಿ ಒಟ್ಟು 25 ದೇಶಗಳಿಗೆ ವಿಸ್ತರಿಸಿದೆ.

ಪರೀಕ್ಷೆಗೆ ಸಂಗ್ರಹಿಸಲಾದ ಸ್ಯಾಂಪಲ್‌ಗಳಲ್ಲಿ ಶೇ. 74ರಷ್ಟರಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಆದರೆ, ಮರಣ ಸಂಭವಿಸದಂತೆ ಲಸಿಕೆ ಕಾಪಾಡುತ್ತಿದೆ ಎಂದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆ (ಎನ್‌ಐಸಿಐಡಿ) ತಿಳಿಸಿದೆ. ಓಮಿಕ್ರಾನ್‌ ಸೋಂಕು ದಕ್ಷಿಣ ಆಫ್ರಿಕಾದ ಗೌಟೆಂಗ್‌ ಪ್ರಾಂತ್ಯದಲ್ಲಿ ನವೆಂಬರ್ 8ರಂದು ಮೊದಲ ಬಾರಿಗೆ ಕಾಣಿಸಿಕೊಂಡಿತು.

ದಕ್ಷಿಣ ಆಫ್ರಿಕಾ ಸೇರಿ ಅದರ ಸುತ್ತಮುತ್ತಲಿನ 8 ದೇಶಗಳ ಪ್ರಯಾಣಿಕರಿಗೆ ಅಮೆರಿಕ ನಿರ್ಬಂಧ ವಿಧಿಸಿದೆ. ಜತೆಗೆ ವಿದೇಶಗಳಿಂದ ಬರುವ ಪ್ರಯಾಣಿಕರ ಪಟ್ಟಿ ನೀಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ. ಡೆಲ್ಟಾ ಪ್ಲಸ್‌ಗಿಂತ ಓಮಿಕ್ರಾನ್‌ ತೀವ್ರವಾಗಿದೆ ಎಂದು ಹೇಳಲಾಗುತ್ತಿರುವ ಕಾರಣ ಅಮೆರಿಕದ ಪ್ರತಿ ಏರ್‌ಪೋರ್ಟ್‌ನಲ್ಲೂ ವಿದೇಶಿ ಪ್ರಯಾಣಿಕರಿಗೆ ಟೆಸ್ಟ್‌ ಮಾಡಲಾಗುತ್ತಿದೆ. ಎಲ್ಲ ದೇಶಗಳ ಪ್ರಯಾಣಿಕರಿಗೆ ಸಾರಾಸಗಟಾಗಿ ನಿರ್ಬಂಧ ವಿಧಿಸುವುದು ಸರಿಯಿಲ್ಲ ಎಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ತಿಳಿಸಿದೆ.

ಓಮಿಕ್ರಾನ್‌ ಪತ್ತೆಯಾಗಿರುವ ದೇಶಗಳು
ಘಾನಾ, ನೈಜೀರಿಯಾ, ನಾರ್ವೆ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಬ್ರಿಟನ್‌, ಜಪಾನ್‌, ಡೆನ್ಮಾರ್ಕ್‌, ಆಸ್ಟ್ರೇಲಿಯಾ, ಹಾಂಗ್‌ಕಾಂಗ್, ಉಜ್ಬೇಕಿಸ್ತಾನ್‌, ಬ್ರೆಜಿಲ್‌, ಬೋಟ್ಸ್ ವಾನಾ, ಚೀನಾ, ಮಾರಿಷಸ್‌, ಜಿಂಬಾಬ್ವೆ, ಸಿಂಗಪುರ್‌, ಇಸ್ರೇಲ್‌. ಪೋರ್ಚುಗಲ್‌, ಸ್ವೀಡನ್‌ ಮತ್ತು ಇದೀಗ ಭಾರತ.

ಇದನ್ನೂ ಓದಿ: There is no proposal for lockdown: ಓಮಿಕ್ರಾನ್; ಲಾಕ್‍ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ.

(Omicron Covid 19 Variant cases are increased in South Africa)