ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವಿಧಿವಶರಾಗಿದ್ದರಿಂದ ಮನನೊಂದು ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಂಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಶರತ್ (೩೦) ಗುರುತಿಸಲಾಗಿದ್ದು,  ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನರಾದ ಸುದ್ದಿ ಶುಕ್ರವಾರ ತಿಳಿಯುತ್ತಿದ್ದಂತೆ ಮನೆಗೆ ಬಂದು ಟಿ.ವಿ. ಮುಂದೆ ಕುಳಿತು ನಿರಂತರವಾಗಿ ಶರತ್ ಕಣ್ಣೀರು ಹಾಕುತ್ತಿದ್ದರು.

ರಾತ್ರಿ ಇಡೀ ನಿದ್ದೆ ಮಾಡಿರಲಿಲ್ಲ. ಬೆಳೆಗ್ಗೆಯೂ ಕೂಟ ಟಿ.ವಿ.ಯ ಮುಂದೆ ಕುಳಿತಿದ್ದರು. ಹೊಟೇಲ್‌ಗಳಿಗೆ ಮರದ ಹೊಟ್ಟು ತುಂಬುವ ಕೆಲಸ ಮಾಡುತ್ತಿದ್ದ ಶರತ್ ಶನಿವಾರ ಕೆಲಸಕ್ಕೂ ಹೋಗಿರಲಿಲ್ಲ. ಮಧ್ಯಾಹ್ನ ೧ ಗಂಟೆಯ ವೇಳೆಗೆ ಶರತ್ ಅವರ ತಂದೆ ಪಿಚ್ಚಂಡಿ ಅವರು ಎದ್ದು ಕೆಲಸಕ್ಕೆ ಹೋಗು ಎಂದು ಮಗನಿಗೆ ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ.

ಮಧ್ಯಾಹ್ನ ೩ ಗಂಟೆಯ ವೇಳೆಗೆ ಶರತ್ ಮನೆಯ ರೂಂಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ. ಅದೇ ವೇಳೆಗೆ ಆತನ ಸಹೋದರ ಮನೆಗೆ ಬಂದಿದ್ದು, ಅಣ್ಣನನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶರತ್ ಅವರಿಗೆ ಒಂದು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭಿಣಿ.

ಈ ಸಂಬಂಧ ಮೃತ ಶರತ್ ಅವರ ತಂದೆ ನೀಡಿರುವ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.