ಚಿಕ್ಕಮಗಳೂರು: ಮಕ್ಕಳು ಎಳೆಯ ವಯಸ್ಸಿನಿಂದಲೇ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಲೆನಾಡು ವಿದ್ಯಾ ಸಂಸ್ಥೆಯ ಸಹಕಾರ್ಯದರ್ಶಿ ಶಂಕರನಾರಾಯಣ ಭಟ್ ಸಲಹೆ ಮಾಡಿದರು.

ನಗರದ ಎಂಇಎಸ್ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ಲಿಂಗದಹಳ್ಳಿ ಜಿ.ಅನಂತ್ ಅವರು ಬರೆದಿರುವ ನಮ್ಮೂರ ಶ್ರೀರಾಮ ಮಂದಿರ ಮತ್ತು ಅನಂತ ಹೆಜ್ಜೆ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪಠ್ಯದ ಜೊತೆಗೆ ಇನ್ನಿತರ ಪುಸ್ತಕಗಳನ್ನು ಓದುವುದರಿಂದ ಮಸ್ತಕ ಬೆಳೆಯುತ್ತದೆ, ಜ್ಞಾನ ವೃದ್ದಿಸುತ್ತದೆ, ಸಂತರು ಮತ್ತು ಮಹಾತ್ಮರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವುದರಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮೊಬೈಲ್, ಕಂಪ್ಯೂಟರ್ ಮತ್ತು ಟಿ.ವಿ. ನಮ್ಮ ಬದುಕನ್ನು ಬಹಳಷ್ಟು ಬದಲಾವಣೆ ಮಾಡಿವೆ, ಓದುವ ಸಂಸ್ಕೃತಿಯನ್ನು ಅವು ನಾಶಗೊಳಿಸಿವೆ ಎಂದು ವಿಷಾದಿಸಿದ ಅವರು ಮೊಬೈಲ್ ನಾವು ತಲೆ ಎತ್ತದಂತೆ ಮಾಡಿದರೆ, ಪುಸ್ತಕಗಳು ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತವೆ ಎಂದು ಹೇಳಿದರು.  ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ.ಎನ್.ಮಂಜುನಾಥ ಭಟ್ ಮಾತನಾಡಿ ಪಿ.ಯು.ಕಾಲೇಜಿನ ವಾಣಿಜ್ಯ ವಿಭಾಗದ ಅಭಿವೃದ್ದಿಗೆ ಅನಂತ್ ಅವರ ಕೊಡುಗೆ ಅಪಾರ ಎಂದರು.

ಲೇಖಕ ಲಿಂಗದಹಳ್ಳಿ ಜಿ.ಅನಂತ್ ಮಾತನಾಡಿ ನೂತನ ಪುಸ್ತಕಗಳ ಬಗ್ಗೆ ಅವುಗಳಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಹಾಗೂ ತಾವು ಲೇಖಕರಾದ ಹಿನ್ನೆಲೆಯನ್ನು ವಿವರಿಸಿ ಪುಸ್ತಕ ಬರೆಯಲು ಮತ್ತು ಬಿಡುಗಡೆಗೊಳ್ಳಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿವೃತ್ತ ಉಪನ್ಯಾಸಕ ಸಿ.ಎಸ್.ವಿಶ್ವನಾಥ್ ಅನಂತ ಹೆಜ್ಜೆ ಹಾಗೂ ನಿವೃತ್ತ ಶಿಕ್ಷಕ ಬಿ.ಲಕ್ಷ್ಮೀ ನಾರಾಯಣ್‍ ನಮ್ಮೂರ ಶ್ರೀರಾಮ ಮಂದಿರ ಪುಸ್ತಕದ ಕುರಿತು ಮಾತನಾಡಿದರು.

ಮಕ್ಕಳ ಸಾಹಿತಿ ಬಾಲಸುಬ್ರಹ್ಮಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಎಂ.ಲೋಕೇಶ್ ಸ್ವಾಗತಿಸಿದರು, ಶಿಕ್ಷಕಿ ಎನ್.ರೂಪ ವಂದಿಸಿದರು.

ಇದನ್ನೂ ಓದಿ: DA: ಸರಕಾರಿ ನೌಕರರಿಗೆ ಶೇ. 3ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳ