ಚಿಕ್ಕಮಗಳೂರು : ಸಾಮಾಜಿಕ ಸಮಸ್ಯೆ ಕುರಿತ ಸಂದೇಶ ಹೊಂದಿರುವ ಕುತೂಹಲ ಭರಿತ ‘ಅಂತ್ಯವಲ್ಲ ಆರಂಭ’ ಚಲನಚಿತ್ರ 2022 ರ ಜ.26 ರಂದು ಸಂಜೆ 7 ಗಂಟೆಗೆ ಪ್ರಿಮೀಯರ್ ಶೋ ಅಂತರ್ಜಾಲ ತಾಣಗಳಲ್ಲಿ ತೆರಕಾಣಲಿದೆ ಎಂದು ಚಿತ್ರದ ನಿರ್ದೇಶಕ ಎನ್.ಬಿ ಜಯಪ್ರಕಾಶ್ ತಿಳಿಸಿದರು.

ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕನ್ನಡದ ಸದಭಿರುಚಿಯ ಚಲನಚಿತ್ರ ಪ್ರೋತ್ಸಾಹ ತಂಡದಿಂದ ಮನರಂಜನೀಯ ಸದಭಿರುಚಿಯ ಪ್ರೇಮ ಕಥಾ ಹಂದರವುಳ್ಳ ‘ಅಂತ್ಯವಲ್ಲ ಆರಂಭ’ಚಲನಚಿತ್ರ ಆನ್‌ಲೈನ್ ಮೂಲಕ ಪ್ರಿಮೀಯರ್ ಮೂಲಕ ಬಿಡುಗಡೆಗೊಳ್ಳಲಿದೆ.

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮತ್ತು ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ದ್ವಿತೀಯ ನಾಯಕನಾಗಿ ನಾಗತಿಹಳ್ಳಿ ಟೆಂಟ್ ಸಿನಿಮಾದ ವಿದ್ಯಾರ್ಥಿ ಶಿಶಿರ್ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಹಿರಿಯ ಸಾಹಿತಿ ವಸುಮತಿ ಉಡುಪ ಸಂಭಾಷಣೆ,ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಮತ್ತು ಚಂದನ್ ಬಾಲ ಕಲ್ಯಾಣ್ ಪ್ರಮುಖ ಹಿನ್ನೆಲೆ ಹಾಡುಗಾರರಾಗಿದ್ದಾರೆ ಎಂದು ತಿಳಿಸಿದರು.

ದೇಶ, ವಿದೇಶಗಳಲ್ಲಿ ಕನ್ನಡ ಸಂಘಟನೆ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಆನ್‌ಲೈನ್ ವರ್ಲ್ಡ್ ಪ್ರಿಮಿಯರ್ ಚಾರಿಟಿ ಮೂಲಕ ಪ್ರದರ್ಶನ ಕಾಣಲಿದೆ ಎಂದರು.

ಮುಂಗಡವಾಗಿ ಹಣ ಪಾವತಿಸಿ ನಿರ್ದಿಷ್ಟ ಲಿಂಕ್ ಮೂಲಕ ಚಿತ್ರ ವೀಕ್ಷಿಸಬಹುದಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಕುರಿತು ನಂತರದ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದಾಗಿ ಹೇಳಿದರು.

ಚಿತ್ರದಿಂದ ಬರುವ ಹಣವನ್ನು ವಿಧವಾ ವಿವಾಹ ಮತ್ತು ವಿಚ್ಚೇದಿತರ ವಿವಾಹ ವೇದಿಕೆ ಪರಿವರ್ತನಾ ಟ್ರಸ್ಟ್ ಮತ್ತು ಪರಿವರ್ತನಾ ಫೌಂಡೇಷನ್‌ಗೆ ಬಳಸಿಕೊಳ್ಳಲಾಗುತ್ತದೆ. ಜಾನ್ ಸಾಲೆ ಹಾಡಿರುವ ಒಂದು ಯಕ್ಷಗಾನದ ಹಾಡು ಸೇರಿದಂತೆ ಒಟ್ಟು ೫ ಹಾಡುಗಳಿದ್ದು ಸಾಮಾಜಿಕ ಉದ್ದೇಶದಿಂದ ನಿರ್ಮಿಸಿರುವ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕ ನಡಹಳ್ಳಿ ಶ್ರೀಪಾದರಾವ್, ದಿನೇಶ್ ಪಟವರ್ಧನ್ ಉಪಸ್ಥಿತರಿದ್ದರು.

ಇದನ್ನೂ ಓದಿ:Funeral: ಭಾನುವಾರ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ