ನವದೆಹಲಿ: ಗೃಹ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ದರ 15 ರೂಪಾಯಿ ಹೆಚ್ಚಳವಾಗಿದ್ದು, ಇದರಿಂದ ದೆಹಲಿಯಲ್ಲಿ 14.2 ಕೆ.ಜಿ. ತೂಕದ ಪ್ರತಿ ಸಿಲಿಂಡರ್‌ ಬೆಲೆ 844.50 ರೂಪಾಯಿನಿಂದ 899.50 ರೂಪಾಯಿಗೆ ಹೆಚ್ಚಳ ಆಗಿದೆ. 5 ಕೆ.ಜಿ. ತೈಕದ ಮಿನಿ ಸಿಲಿಂಡರ್‌ ಬೆಲೆ 502 ರೂಪಾಯಿಗೆ ಏರಿದೆ.

ಕೋಲ್ಕತದಲ್ಲಿ 14.2 ಕೆ.ಜಿ ತೂಕದ ದರ 911 ರೂಪಾಯಿ, ಮುಂಬೈನಲ್ಲಿ 884.50 ರೂಪಾಯಿ, ಚೆನ್ನೈನಲ್ಲಿ 900.50 ರೂಪಾಯಿಗೆ ಏರಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ತಿಳಿಸಿದೆ. ಸೆಪ್ಟೆಂಬರ್‌ 1ರಂದು ಗೃಹ ಬಳಕೆಯ ಎಲ್‌ಪಿಜಿ ದರ 25 ರೂಪಾಯಿ ಹೆಚ್ಚಳ ಕಂಡು 884.50 ರೂಪಾಯಿಗೆ ತಲುಪಿದೆ.

ಕಳೆದ ವರ್ಷದ ಮೇ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್‌ ಮೇಲಿನ ಸಬ್ಸಿಡಿಯನ್ನು ಸರ್ಕಾರ ಸ್ಥಗಿತ ಮಾಡಿದೆ. ಆದರೆ, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲೇ ಸಿಲಿಂಡರ್‌ ಪೂರೈಕೆ ಆಗಲಿದೆ.

ಐದು ದಿನಗಳ ಹಿಂದೆ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ದರ 43.50 ರೂಪಾಯಿ ಏರಿಕೆ ಆಗಿತ್ತು. ಇದರಿಂದ ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ ಬೆಲೆ 1,736.50 ರೂಪಾಯಿಗೆ ಏರಿಕೆ ಕಂಡಿತ್ತು. ಸೆಪ್ಟೆಂಬರ್‌ 1ರಂದು 75 ರೂಪಾಯಿ ಹೆಚ್ಚಳದ ಮೂಲಕ 1,693 ರೂಪಾಯಿಗೆ ಹೆಚ್ಚಳ ವಾಗಿತ್ತು. ಅಂತರರಾಷ್ಟ್ರೀಯ ತೈಲ ಬೆಲೆಯನ್ನು ಆಧರಿಸಿ ಎಲ್‌ಪಿಜಿ ದರ ಪ್ರತಿ ತಿಂಗಳು ಪರಿಷ್ಕರಣೆ ಆಗುತ್ತಿದೆ.

ಪೆಟ್ರೋಲ್‌-ಡೀಸೆಲ್‌ ದರವೂ ಏರಿಕೆ

ಈ ಮಧ್ಯೆ, ಪೆಟ್ರೋಲ್‌-ಡೀಸೆಲ್‌ ದರ ಬುಧವಾರವೂ ಪರಿಷ್ಕರಣೆ ಆಗಿದೆ. ಪೆಟ್ರೋಲ್‌ ದರ 30 ಪೈಸೆ ಮತ್ತು ಡೀಸೆಲ್‌ ಬೆಲೆ 35 ಪೈಸೆ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ 102.94 ರೂಪಾಯಿ ಮತ್ತು ಡೀಸೆಲ್‌ಗೆ 91.42 ರೂಪಾಯಿ ಮುಟ್ಟಿದೆ. ಮಧ್ಯಪ್ರದೇಶದ ಭೋಪಾಲ್‌ ಸೇರಿ ಇತರ ಕೆಲವು ನಗರಗಳಲ್ಲಿ ಡೀಸೆಲ್‌ ದರ 100 ರೂಪಾಯಿ ಗಡಿದಾಟಿದೆ.

ಕಳೆದ ತಿಂಗಳ ಕೊನೆಯ ವಾರದಿಂದೀಚೆಗೆ ಪೆಟ್ರೋಲ್‌ ದರ 7 ಸಲ ಏರಿಕೆ ಆಗಿದ್ದು, 1.75 ರೂಪಾಯಿಗೂ ಮತ್ತು ಡೀಸೆಲ್‌ ಬೆಲೆ 10 ಸಲ ಪರಿಷ್ಕರಣೆ ಆಗಿದೆ. ಈ ಮಧ್ಯೆ, ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್‌ ದರ್ಜೆಯ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ 82.53 ಡಾಲರ್‌ಗೆ ತಲುಪಿದೆ. ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯಟ್‌ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಧಾರಣೆ ಪ್ರತಿ ಬ್ಯಾರೆಲ್‌ಗೆ 78.87 ಡಾಲರ್‌ಗೆ ತಲುಪಿದೆ.

LPG Cylinder Price Hike

ಇದನ್ನೂ ಓದಿ:ಸಬ್ಸಿಡಿ ಗೋತ: ಬೆಲೆ ಏರಿಕೆಯ ಹೊರೆ: LPG ಸಿಲಿಂಡರ್

ಇದನ್ನೂ ಓದಿ:ಖಾದ್ಯತೈಲಗಳ ಬೆಲೆ ಇಳಿಕೆ