ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ಕಂದಾಯ ನಿರೀಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಬರೆದಿಟ್ಟಿದ್ದಾರೆ.

ಸೋಮಶೇಖರ್ (೪೫) ಮೃತ ವ್ಯಕ್ತಿ, ಮೊದಲು ಬಾಳೆಹೊನ್ನೂರಿನಲ್ಲಿ ವಿಲೇಜ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿದ್ದ ಇವರು ಬಡ್ತಿ ಹೊಂದಿ ಲಕ್ಕವಳ್ಳಿಯಲ್ಲಿ ವಾಸವಾಗಿದ್ದರು. ಲಕ್ಕವಳ್ಳಿಯ ಕದಳಿ ರಂಗನಾಥ ದೇವಾಲಯದ ಬಳಿ ನಾಲೆಯಲ್ಲಿ ಬಿದ್ದಿದ್ದು, ಶವ ಪತ್ತೆಯಾಗಿದೆ.

ಅಕ್ರಮ ಸಕ್ರಮ ಸಮಿತಿಯವರು ಸ್ಮಶಾನ ಭೂಮಿ ಸೇರಿದಂತೆ ವಿವಿಧ ಸರ್ಕಾರಿ ಭೂಮಿಯನ್ನು ಒತ್ತುವರಿ ತೆರವು ಮಾಡುವುದರ ಬದಲು ಸಕ್ರಮಗೊಳಿಸಲು ನಿರಂತರ ಒತ್ತಡ ನೀಡುತ್ತಿದ್ದರು ಎಂದು ಹೇಳಲಾಗಿದೆ. ‘ತನ್ನ ಸಾವಿಗೆ ಅಕ್ರಮ ಸಕ್ರಮ ಸಮಿತಿಯ ಕಿರುಕುಳವೇ ಕಾರಣ’ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.  ಘಟನೆ ಬಗ್ಗೆ ಖೇದಗೊಂಡಿರುವ ಕಂದಾಯ ಇಲಾಖೆ ನೌಕರರ ಸಂಘ, ನಾಳೆ ಕಪ್ಪು ಬಟ್ಟೆ ಧರಿಸಿ ಕಚೇರಿ ಕಾರ್ಯ ನಿರ್ವಹಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ನಿರ್ಧರಿಸಿದೆ.