ಚಿಕ್ಕಮಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತ್ವರಿತಗತಿಯಲ್ಲಿ ನೇಮಕ ಮಾಡುವಂತೆ ಆದೇಶಿಸಲು ಒತ್ತಾಯಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೇಶದಲ್ಲಿ ಸ್ವಚ್ಛ ಭಾರತ ಎನ್ನುತ್ತಾ ಅರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ, ಅನೇಕ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ, ನಿರುದ್ಯೋಗಿಗಳಿಗೆ ಮಾತ್ರ ಉದ್ಯೋಗ ಭರವಸೆ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಗಳನ್ನು ಮಾಡಿದರು.

ಪ್ರಸ್ತುತ ವ್ಯವಸ್ಥೆಯಲ್ಲಿ ಗುತ್ತಿಗೆ ಆದಾರದ ಮೇಲೆ ದುಡಿಸಿಕೊಳ್ಳುತ್ತಾರೆ, ಆದರೆ ಉತ್ತಮ ಸಂಬಳ, ಉದ್ಯೋಗ ಭದ್ರತೆ ಒದಗಿಸುವ ಮೂಲಕ ನಿರುದ್ಯೋಗ ನಿವಾರಿಸುವ ಪ್ರಯತ್ನ ಆಗುತ್ತಿಲ್ಲ ಎಂದಿದ್ದಾರೆ.

ನೂತನ ರಾಜ್ಯ ಸರ್ಕಾರ ಈಗಲಾದರೂ ಎಲ್ಲಾ ಇಲಾಖಾವಾರು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಕ್ಷಿಪ್ರಗತಿಯಲ್ಲಿ ಏರುತ್ತಿರುವ ನಿರುದ್ಯೋಗ ಸಮಸ್ಯೆ ಗೆ ಕೊನೆ ಹಾಡಬೇಕೆಂದು ಪ್ರತಿಭಟಕಾರರು ತಿಳಿಸಿದರು.

ಅಲ್ಲದೆ ಅನೇಕಹುದ್ದೆಗಳಿಗೆ ಈಗಾಗಲೇ ಸಂದರ್ಶನ ನಡೆಸಿದ್ದು ನೇಮಕಾತಿ ಪ್ರಕ್ರಿಯೆಗೆ ತಡೆಹಿಡಿದಿದ್ದು ಅತಂತ್ರ ಸ್ಥಿತಿ ಮಾಡಿದ್ದಾರೆ.  ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ನೇಮಕಾತಿ ಆದೇಶ ನೀಡಲು ಒತ್ತಾಯಿಸಿದರು..