ಮಂಗಳೂರು: ತೆಂಕುತಿಟ್ಟು ಯಕ್ಷರಂಗದ ಅಗ್ರ ಪಂಕ್ತಿಯ, ಗಾನಗಂಧರ್ವ ಖ್ಯಾತಿಯ ಹಿರಿಯ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ (66) ಮಂಗಳವಾರ ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಮಡ್ಕದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ತಿಂಗಳುಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಅದರಿಂದ ಗುಣಮುಖರಾಗಿದ್ದ ಅವರು ನ್ಯುಮೋನಿಯಾಕ್ಕೂ ಒಳಗಾಗಿದ್ದರು. ಬಳಿಕ ಹೃದಯಸಂಬಂಧಿ ಕಾಯಿಲೆಯ ಕಾರಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಗುಣಮುಖರಾಗಿ ಮನೆಗೆ ಮರಳಿದ್ದರು. ಮಂಗಳವಾರ ಬೆಳಿಗ್ಗೆ ಅವರಿಗೆ ದಿಡೀರ್ ಹೃದಯಾಘಾತವಾಗಿದೆ.

ಗಣಪತಿ ಭಟ್ಟರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಓದಿ: ದೀಪಾ ಹಿರೇಗುತ್ತಿ – ಮಮತಾ ಅರಸೀಕೆರೆಗೆ ಮಯೂರ ವರ್ಮ ಪ್ರಶಸ್ತಿ ಗರಿ

ಕಲಾವಿದರಿಂದಲೇ ಕೂಡಿದ ಪದ್ಯಾಣ ಮನೆತನದ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಪುತ್ರನಾಗಿ ಸಾವಿರ 1955ರಲ್ಲಿ ಜನಿಸಿದ ಗಣಪತಿ ಭಟ್ಟರು ತಮ್ಮ ಅಜ್ಜ ಪುಟ್ಟು ನಾರಾಯಣ ಭಾಗವತರಿಂದ ಭಾಗವತಿಕೆಯ ಪ್ರಾಥಮಿಕ ಪಾಠ ಹೇಳಿಸಿಕೊಂಡಿದ್ದರು. ಬಳಿಕ ಮಾಂಬಾಡಿ ನಾರಾಯಣ ಭಾಗವತರಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ್ದರು.

ಸುರತ್ಕಲ್ ಮೇಳದಲ್ಲಿ ಯಕ್ಷರಂಗದ ಬೀಷ್ಮ ಡಾ. ಶೇಣಿ ಗೋಪಾಲಕೃಷ್ಣ ಭಟ್ಟ, ಮಲ್ಪೆ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್, ಕುಂಬಳೆ ಸುಂದರರಾವ್ ಮೊದಲಾದ ಹಿರಿಯ ಕಲಾವಿದರ ಒಡನಾಟದಲ್ಲಿ ಮೆರೆದಿದ್ದರು. ನೂರಾರು ಯಕ್ಷಗಾನ ಪ್ರದರ್ಶನಗಳನ್ನು ಮೆರೆಯಿಸಿದ್ದರು. 16ನೇ ವಯಸ್ಸಿನಲ್ಲೇ ವೃತ್ತಿಪರ ಭಾಗವತಿಕೆ ಆರಂಭಿಸಿದ್ದ ಭಟ್ಟರು ಸುರತ್ಕಲ್ ಮಾತ್ರವಲ್ಲದೆ, ಕರ್ನಾಟಕ, ಎಡನೀರು, ಹೊಸನಗರ, ಹನುಮಗಿರಿ ಸೇರಿದಂತೆ ಹಲವು ಮೇಳಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರಾಗಿದ್ದರು ಎಂಬುದು ಗಣಪತಿ ಭಟ್ಟರ ಹೆಗ್ಗಳಿಕೆ.

ಅಭಿಮಾನಿಗಳೇ ನಡೆಸಿದ ‘ಪದ್ಯಾಣ ಪದ ಯಾನ’ ಎಂಬ ಅಭಿನಂದನಾ ಕಾರ್ಯಕ್ರಮ, ಅಭಿನಂದನಾ ಗ್ರಂಥ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಅವರು ಭಾಜನರಾಗಿದ್ದಾರೆ.

ಓದಿ: ಮಗುವಿನ ಲಿಂಗ ಬಹಿರಂಗಪಡಿಸಲು ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಂಡ ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

‘ಈ ಟಿವಿ’ ವಾಹಿನಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ತೀರ್ಪುಗಾರರಾಗಿ ಭಾಗವಹಿಸಿದ ಯಕ್ಷಗಾನದ ಭಾಗವತ ಎಂಬ ಕೀರ್ತಿಯೂ ಗಣಪತಿ ಭಟ್ಟರದ್ದಾಗಿದೆ.

ಬೊಮ್ಮಾಯಿ, ಶೋಭಾ ಕರಂದ್ಲಾಜೆ ಸೇರಿ ಗಣ್ಯರಿಂದ ಸಂತಾಪ

ಭಾಗವತ ಗಣಪತಿ ಭಟ್ಟರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಅರವಿಂದ ಲಿಂಬಾವಳಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

‘ಯಕ್ಷಗಾನ ಕಲಾ ಕ್ಷೇತ್ರದಲ್ಲಿ ತಮ್ಮ ಕಂಚಿನ ಕಂಠದಿಂದ ಜನಮೆಚ್ಚಿದ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರ ಅಗಲಿಕೆಯಿಂದ ಸಾಂಸ್ಕೃತಿಕ ರಂಗಕ್ಕೆ ಭರಿಸಲಾರದ ನಷ್ಟವಾಗಿದೆ. ನಾಲ್ಕು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪದ್ಯಾಣ ಗಣಪತಿ ಭಟ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.


‘ತೆಂಕುತಿಟ್ಟಿನ ಯಕ್ಷಗಾನದ ಜನಮೆಚ್ಚಿದ ಭಾಗವತರಾದ, ಗಾನಗಂಧರ್ವ ಶ್ರೀ ಪದ್ಯಾಣ ಗಣಪತಿ ಭಟ್ ಅವರ ಅಗಲಿಕೆ ಸುದ್ದಿ ಅತೀವ ದುಃಖವನ್ನು ತಂದಿದೆ. ತಮ್ಮ ಕಂಚಿನ ಕಂಠದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಶ್ರೀಯುತರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೇ ತುಂಬಲಾರದ ನಷ್ಟ. ಭಗವಂತನು ಅವರಿಗೆ ಸದ್ಗತಿ ಕರುಣಿಸಲಿ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.


‘ಯಕ್ಷಗಾನ ಭಾಗವತಿಕೆಯ ಗಾನಗಂಧರ್ವ ಎಂದು ಹೆಸರಾಗಿದ್ದ ಹಿರಿಯ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರು ಇಹಲೋಕ ತ್ಯಜಿಸಿದ್ದು, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಯಕ್ಷಗಾನ ಕಲಾ ಜಗತ್ತಿಗೆ ಅವರ ಕೊಡುಗೆ ಅಪಾರ. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಅದ್ಭುತ ಪ್ರತಿಭೆಯ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.