ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮದ ಹರೀಶ್ ಎಂಬಾತ ತನ್ನ ತೋಟದಲ್ಲಿ ಹೋರಿಯೊಂದನ್ನು ಮಾಂಸಕ್ಕಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಮಲೆನಾಡು ಭಾಗದಲ್ಲಿ ನಿರಂತರವಾಗಿ ಗೋ ಹತ್ಯೆ ನಡೆಯುತ್ತಲೇ ಇದೆ ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಅಮಿತ್ ಚೌಗುಲೆ ಎಂಬ ಪೇದೆಯು ಕಾರ್ಯ ನಿರ್ವಹಿಸುತ್ತಾ ಇರುವ ಸಂದರ್ಭದಲ್ಲಿ ಆತನ ಗಮನಕ್ಕೆ ಬಂದಿದ್ದು, ಕೂಡಲೇ ಹರೀಶನ ತೋಟಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತೋಟದ ಅಡಿಕೆ ಮರದ ಬುಡವನ್ನು ಪೇದೆ ಅಮಿತ್ ಪರಿಶೀಲಿಸಿದಾಗ ಅಕ್ರಮವಾಗಿ ಹೊರಿಯೊಂದನ್ನು ಕೊಂದು ಅದರ ಎರಡು ಕಾಲು ಮತ್ತು ತೊಡೆಯನ್ನು ಆರೋಪಿಯು ಕಡಿದು ಮಾಂಸ ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿತ್ತು.

ಹರೀಶ್ ಅವರ ತೋಟದಲ್ಲೇ ಈ ಕೃತ್ಯ ನಡೆದಿರುವುದರಿಂದ ಹರೀಶ್ ಅವರ ಮೇಲೆ ಈ ಕೂಡಲೇ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೇದೆ ಅಮಿತ್ ಚೌಗುಲೆ ಅವರು ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ಆರಂಭಿಸಿದ್ದಾರೆ.

ಅರ್ಧಭಾಗದಿಂದ ಕಡಿದಿದ್ದ ದನದ ಶರೀರವನ್ನು ಪೊಲೀಸರೇ ಕ್ರಮಪ್ರಕಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ಸಂಬಂಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.