ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಜನರು ತಾಳ್ಮೆಗೆಟ್ಟರೆ ಇಲ್ಲಿರುವ ಕೇಂದ್ರಾಡಳಿತ ವ್ಯವಸ್ಥೆ ಮಾಯವಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಪಿಡಿಪಿ ಅಧ್ಯಕ್ಷೆ ಹಾಗೂ ಮಾಜಿ ಸಿಎಂ ಮೆಹಬೂಬ ಮುಫ್ತಿ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯೊಂದರಲ್ಲಿ ಅವರು ಕೇಂದ್ರದ ಕ್ರಮ ವಿರೋಧಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಕಾನೂನುಬಾಹಿರವಾಗಿ ಮತ್ತು ಅಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನವನ್ನು ಕಿತ್ತುಕೊಳ್ಳಲಾಗಿದೆ. ಇದು ಸರಿಯಲ್ಲ.  ತಕ್ಷಣವೇ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂದು ಬಹಿರಂಗವಾಗಿ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಭಾರತ ಪಾಠ ಕಲಿಯಬೇಕಿದೆ. ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಗಡಿಯಾಚೆಗಿನ ದೇಶಗಳ ಜೊತೆ ಮಾತುಕತೆ ಆರಂಭಿಸಿದಂತೆ ಪ್ರಸಕ್ತ ಆಡಳಿತದಲ್ಲಿರುವ ಸರ್ಕಾರವೂ ಸ್ಥಳೀಯ ಜನರ ಹಿತಾಸಕ್ತಿಗೆ ತಕ್ಕಂತೆ ಆಡಳಿತ ನಡೆಸಬೇಕಾದ ಅಗತ್ಯ ಮನಗಾಣಬೇಕು ಎಂದವರು ಹೇಳಿದ್ದಾರೆ.