ಇಂದು ಜೀವಿಸುತ್ತಿರುವ ನಮ್ಮ ಜೀವನ ವಿಧಾನವನ್ನು, ನಮ್ಮ ಪರಿಸರವನ್ನು, ತಂತ್ರಜ್ಞಾನವನ್ನು ಸರಳೀಕರಣ ಮಾಡಲು ತಪೋಗೈದು ಸಾಧನೆಗೈವ ತಪೋಮುನಿಗಳಾಗಲೀ, ಅಧಿಕಾರದ ಆಸೆಗಾಗಿ, ಸಾಮ್ರಾಜ್ಯಕ್ಕಾಗಿ ಪರಿತಪಿಸಿದ ರಾಜ-ಮಹಾರಾಜರಾಗಲಿ ಯಾವುದೇ ಕೊಡುಗೆ ನೀಡಲಿಲ್ಲ. ವಿಜ್ಞಾನ-ತಂತ್ರಜ್ಞಾನ, ಉದ್ಯಮ, ಪರಿಸರ, ರಾಜಕೀಯ, ಸಮಾಜ ಸುಧಾರಣೆ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದು, ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿದ, ನಮ್ಮೆಲ್ಲರ ಹೆಮ್ಮೆಯ ಕ್ಷಿಪಣಿ ಪಿತಾಮಹ, ಬಾಹ್ಯಾಕಾಶ ವಿಜ್ಞಾನಿ, ಭಾರತ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಹುಟ್ಟಿದ 91 ನೇ ಜನುಮ ದಿನಕ್ಕೆ ಈ ಲೇಖನ ಸಮರ್ಪಣೆ. ಅಂದರೆ ಡಾ.ಕಲಾಂ ರವರು ಜನಿಸಿದ್ದು1931 ರ ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರನಲ್ಲಿ.

ಡಾ. ಕಲಾಂ ರವರು ಸಾಧಿಸಿರುವ ಸಾಧನೆ, ಸಾಹಸ ಇಂದಿಗೂ ಜೀವಂತ. ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಅಬ್ದುಲ್ ಕಲಾಂ ರವರು, ಮೇರು ವ್ಯಕ್ತಿತ್ವದ ಮಹಾನ್ ವ್ಯಕ್ತಿ. ಕ್ಷಿಪಣಿಗಳ ಪಿತಾಮಹ(ಮಿಸೈಲ್ಮ್ಯಾನ್) ಎಂದೇ ಖ್ಯಾತರಾಗಿದ್ದ ವಿಜ್ನಾನಲೋಕದ ಧ್ರುವತಾರೆ. ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಜೀವನದಲ್ಲಿ ಒಂದು ಕ್ಷಣವೂ ವ್ಯರ್ಥವಾಗದಂತೆ ಬದುಕಿದವರು. ಸರ್ವ ಧರ್ಮಗಳಸಮನ್ವಯತೆಯನ್ನು ಮೈಗೂಡಿಸಿಕೊಂಡಿದ್ದ ಕಲಾಂ ಅವರನ್ನು “ ವಿಜ್ಞಾನಿ ಸಂತ” ಎಂದರೂ ತಪ್ಪೇನಿಲ್ಲ. ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಅಬ್ದುಲ್ ಕಲಾಂ ಅವರ ರಾಷ್ಟ್ರಸೇವೆ ಅನನ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿನೂತನ ಸಂಶೋಧನೆಗಲಿಗೆಅವರ ಕೊಡುಗೆ ಅಪಾರ, ಅದ್ವಿತೀಯ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಸತತ ಪ್ರಯತ್ನ ಮಾಡಿದರು.

ಡಾ. ಅಬ್ದುಲ್ ಕಲಾಂ ಅವರು, ಕೇವಲ ಒಬ್ಬ ವಿಜ್ನಾನಿಯಾಗಿ ಅಥವಾ ನೆಪ ಮಾತ್ರದ ರಾಷ್ಟ್ರಪತಿಯಾಗಿ ಕೆಲಸ ಮಾಡಲಿಲ್ಲ. ಪ್ರತಿಯೊಂದು ಕ್ಷಣದಲ್ಲೂ ತಮ್ಮ ಸಾಮರ್ಥ್ಯ, ಯೋಚನಾ ಲಹರಿ, ಅಧಿಕಾರ ಮತ್ತು ಪ್ರಭಾವಕ್ಕಾಗಿ ದೇಶಕ್ಕಾಗಿ ಹೇಗೆ ವಿನಿಯೋಗಿಸಬೇಕು ಎಂದು ಪರಿತಪಿಸುತ್ತಿದ್ದರು. ಸಾಧನೆಯ ಹಿಂದೆ ಸಾಲುಗಳು, ಹತಾಶೆಗಳು ಸಾಮಾನ್ಯ. ಆದರೆ ಸೋಲಿಗೆ ಶರಣಾಗದೆ ಗೆಲುವಿನತ್ತ ಹೆಜ್ಜೆ ಹಾಕಿದ ಅವರ ನಡೆ ಎಲ್ಲರಿಗೂ ಆದರ್ಶ. ಯಾವುದೇ ಕೆಲಸ ನಿರ್ವಹಿಸಿದರೂ ನಿಸ್ಪೃಹತೆಯಿಂದ ದುಡಿದರು. ತಂತ್ರಜ್ಞರಿಗೆ ಎಲ್ಲಾ ಕೆಲಸಗಳಲ್ಲೂ ಭರವಸೆ ಮೂಡಿಸಿದರು.ಧೃಡ ನಿಶ್ಚಯದಿಂದ ತಮ್ಮ ಪ್ರಭಾವವನ್ನು ಬೀರಿದವರು. ಭಾರತಕ್ಕೆ ಸ್ವಾವಲಂಬನ ಶಕ್ತಿಯಿದೆ ಎಂದು ಜಗತ್ತಿಗೆ ತೊರಿಸಿದವರು.ಯಾವ ಆಡಂಬರವನ್ನೂ ಇಚ್ಚಿಸದೇ ಪ್ರಾಮಾಣಿಕವಾಗಿ ದುಡಿದವರು. ದೇಶ ಸೇವೆಗೆ ಅವಕಾಶ ಸಿಕ್ಕಾಗ ಗರ್ವಪಡದ ಅದಮ್ಯ ವ್ಯಕ್ತಿ.

ಡಾ. ಕಲಾಂ ಅವರು  ಮಕ್ಕಳನ್ನು  ಸಾಮಾನ್ಯವಾಗಿ ತುಂಬಾ ಇಷ್ಟ ಪಡುತ್ತಿದ್ದರು. ಅವರಿಗೆ ಪುಟ್ಟ ಮಕ್ಕಳು, ಅದರಲ್ಲೂ ಶಾಲಾ ಮಕ್ಕಳು ಎಂದರೆ, ಎಲ್ಲಿಲ್ಲದ ಪ್ರೀತಿ. ಭಾರತದ ಪ್ರಥಮ ಪ್ರಧಾನಿ ನೆಹರೂ ನಂತರ ಮಕ್ಕಳನ್ನು ಅತಿ ಹೆಚ್ಚು ಇಷ್ಟ ಪಡುತ್ತಿದ್ದವರೆಂದರೆ ಕಲಾಂ. ಅವರು ರಾಷ್ಟ್ರಪತಿಯಾಗಿ ಬಹಳ ಕಡಿಮೆ ಸಮಯದಲ್ಲಿ ಲಕ್ಷಾಂತರ ಮಕ್ಕಳನ್ನು ಸಂದರ್ಶಿಸಿದ್ದಾರೆ.ಮಕ್ಕಳೊಂದಿಗೆ ಬೆರೆತು, ಅವರುಕೇಳುತ್ತಿದ್ದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ, ಹಾಗೆಯೇಅವರೊಂದಿಗೆ ಹರಟುತ್ತಿದ್ದರು ಕೂಡಾ. ಮಕ್ಕಳಿಗೆ ನಗಿಸುವ ಕಲೆಯನ್ನೂ ಕರಗತ ಮಾಡಿಕೊಂದ್ದರು. ಅವರು ರಾಷ್ಟ್ರಪತಿಯಾಗಿದ್ದರೂ ಸಹ ಶಿಕ್ಷಕರುಗಳಿಗೆ ಉಪನ್ಯಾಸ ನೀಡುತ್ತಿದ್ದರು. ಕೊನೆಗೆ 2015 ಜುಲೈ 27 ರಂದು ಉಪನ್ಯಾಸ ನೀಡುತ್ತಲೇ ಇಹಲೋಕ ತ್ಯಜಿಸಿದರು. “ವಿಷನ್ 2020” ಅವರ ಕನಸಿನ ಕೂಸು. ಭವ್ಯ ಭಾರತದ ಕನಸು ಕಂಡಿದ್ದ ಅವರಿಗೆ ನಾವು ನೀಡುವ ಕೊಡುಗೆಯೆಂದರೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಕನಸನ್ನು ನನಸು ಮಾಡುವುದು. ನಮೋಕಲಾಂ.

ಎಚ್.ಎಸ್.ಟಿ.ಸ್ವಾಮಿ , ಚಿತ್ರದುರ್ಗ