ನೇತಾಜಿ ಸುಭಾಷ್ ಚಂದ್ರ ಬೋಸ್ ರ ಹೆಸರು ಕೇಳಿದರೇ ಸಾಕು ರೋಮಾಂಚನದ ಲಹರಿ ಮೈಮನಗಳಲ್ಲಿ ಹಾದುಹೋಗುತ್ತದೆ. ಆ ಮಹಾನ್ ಚೈತನ್ಯ ನಮ್ಮ ಭಾರತದಲ್ಲಿ ಹುಟ್ಟಿದ್ದು ದಿನಾಂಕ.23-01-1897ರಲ್ಲಿ, ನೂರಿಪ್ಪತ್ತೈದು ವರ್ಷಗಳ ಹಿಂದೆ! ಭಾರತೀಯತೆಯ ಸ್ವಾತಂತ್ರ್ಯದ ಉಸಿರಿಗಾಗಿ ಆ ಅಪೂರ್ವ ಚೇತನ ಕೈಗೊಂಡ ಸಾಹಸಯಾತ್ರೆಗಳಿಂದ, ನೀಡಿದ ತ್ಯಾಗ ಬಲಿದಾನಗಳಿಂದ ಅವರ ದಿವ್ಯಸ್ಮರಣೆ ಇಂದಿಗೂ ಭಾರತೀಯರ ನರನಾಡಿಗಳಿಗೆ ವಿಶೇಷಶಕ್ತಿ ನೀಡುತ್ತಿದೆ. ಸುಭಾಷ್ ಚಂದ್ರಬೋಸರು ಭೌತಿಕವಾಗಿ ಕಣ್ಮರೆಯಾದರೂ ಎಂದೆಂದಿಗೂ ಆ ಅಮರ ಚೈತನ್ಯದ ಅಪೂರ್ವ ಸ್ಪೂರ್ತಿ ಭಾರತೀಯರ ಮನೆ-ಮನಗಳಲ್ಲಿ ತುಂಬಿಕೊಂಡಿದೆ‌

ಒರಿಸ್ಸಾದ ಕಟಕ್ ನಲ್ಲಿ ಪ್ರಸಿದ್ಧ ಲಾಯರ್ ಜಾನಕಿನಾಥ ಬೋಸ್. ಪತ್ನಿ ಪ್ರಭಾವತಿ. ಈ ದಂಪತಿಗಳ ಹದಿನಾಲ್ಕು ಜನ ಮಕ್ಕಳಲ್ಲಿ ಒಂಬತ್ತನೆಯವರು ನಮ್ಮ ಸುಭಾಷ್. ತೀರಾ ಅಂತರ್ಮುಖಿಯಾದ ಬಾಲ್ಯ. ಇವರ ಶಾಲೆ, ಕಟಕ್‍ನ ರಯಾವೆನ್ ಶಾ ಕೊಲಿಜಿಯೇಟ್ ಪ್ರಾಥಮಿಕ ಶಾಲಾ ವ್ಯಾಸಂಗದಲ್ಲಿ ಭಾರತೀಯ ಸಂಸ್ಕೃತಿಯ ತಿಳಿವಳಿಕೆಗೆ ಆಸ್ಪದವಿರಲಿಲ್ಲ. ಆದರೆ, ಮುಖ್ಯೋಪಾಧ್ಯಾಯರಾದ ಮಾಧವ ದಾಸರ ಪ್ರೇರಣೆ ಸುಭಾಷರಲ್ಲಿ ಹೊಸ ಸತ್ವವನ್ನು ತುಂಬಿತ್ತು. ಅದಾಗ ತಾನೇ ಅಸ್ತಂಗತರಾಗಿದ್ದ ಸ್ವಾಮಿ ವಿವೇಕಾನಂದರ ಪ್ರಭಾವ ಈ ಎಳೆಯ ಬಾಲಕನ ಮೇಲೆ ಬಿದ್ದಿತು. ಸುಭಾಷ್ ಹತ್ತರ ಬಾಲಕನಾಗಿದ್ದಾಗಲೇ ಸ್ವಾಮಿ ವಿವೇಕಾನಂದರ ಬಗ್ಗೆ ಪೂರ್ಣ ತಿಳಿದುಕೊಂಡಿದ್ದರು. ವಿವೇಕಾನಂದರ ಸಾಹಿತ್ಯ, ಪತ್ರಗಳು ಸುಭಾಷರಿಗೆ ಅಂದಿನ ಪರಿಸ್ಥಿತಿಯ ವ್ಯವಸ್ಥಿತ ವಿಶ್ಲೇಷಣೆ ಮಾಡುವ ಶಕ್ತಿಯನ್ನು ತಂದುಕೊಟ್ಟಿತ್ತು. ‘ಕೊಲಂಬೋದಿಂದ ಆಲ್ಮೋರಾ’ದವರೆಗಿನ ಉಪನ್ಯಾಸಗಳನ್ನು ತನಗಾಗಿಯೇ ಸ್ವಾಮಿವಿವೇಕಾನಂದರು ಬಿಟ್ಟು ಹೋಗಿದ್ದಾರೆಂಬ ಭಾವತನ್ಮಯತೆ ಸುಭಾಷರದಾಗಿತ್ತು! ಬಾಲ್ಯದ ಇಂತಹ ಖಚಿತ ನಿಲುವುಗಳಿಂದ ಸುಭಾಷರು 1919ರಲ್ಲಿ ತತ್ವಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದರು.

ಇಂಗ್ಲೆಂಡ್‍ನಲ್ಲಿ ಐಸಿಎಸ್ ಪರೀಕ್ಷೆ ಬರೆದು ಭಾರತೀಯ ಸಿವಿಲ್ ಸರ್ವಿಸ್ ಸೇವೆಗೆ ಮಗ ಸೇರಬೇಕೆಂಬುದು ಪೋಷಕರ ಕನಸು. ಈ ಕನಸಿನ ಪೂರೈಕೆಗಾಗಿ ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯಕ್ಕೆ ತೆರಳಿದ ಸುಭಾಷರು ಆ ಪರೀಕ್ಷೆಯಲ್ಲಿ ನಾಲ್ಕನೆಯ ಉನ್ನತ ಸ್ಥಾನ ಪಡೆದರು. ಇದೇ ಅವಧಿಯಲ್ಲಿ ಲೋಕಮಾನ್ಯ ತಿಲಕರು ಕೇಂಬ್ರಿಡ್ಜ್‍ಗೆ ಭೇಟಿ ನೀಡಿದ್ದರು. ‘ಬ್ರಿಟೀಷರಿಗಾಗಿ ಕೆಲಸ ಮಾಡದೆ ದೇಶಕ್ಕಾಗಿ ಕೆಲಸ ಮಾಡಬೇಕು’ ಎಂದ ಅವರ ನುಡಿಗಳು ಸುಭಾಷರ ಹೃದಯದಲ್ಲಿ ನೆಲೆ ನಿಂತವು. ಆಗಲೇ ತಮ್ಮ ಸಹೋದರ ಶರತ್ ಚಂದ್ರ ಬೋಸರಿಗೆ ಬರೆದ ಪತ್ರದಲ್ಲಿ ‘ನನಗೆ ಗುಲಾಮಗಿರಿಯ ಬದುಕು ಸಾಧ್ಯವಿಲ್ಲ. ಈ ಕೆಲಸವನ್ನು ನಾನು ಮಾಡುವುದಿಲ್ಲ’ ಎಂದು ತಮ್ಮ ಮನಸ್ಸನ್ನು ತೆರೆದಿಟ್ಟಿದ್ದರು.

1920ರಲ್ಲಿ ಕೇಂಬ್ರಿಡ್ಜ್ ಪದವೀಧರನಾಗಿ ಇಂಡಿಯನ್ ಸಿವಿಲ್ ಸರ್ವೀಸ್ ಕೆಲಸಕ್ಕೆ ಸೇರಿದರು. ಆದರೆ, ಅದರಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸುಭಾಷರಿಗೆ ಸಾಧ್ಯವೇ ಆಗಲಿಲ್ಲ. ಅದೇ ಸಮಯದಲ್ಲಿ ಶ್ರೀ ಅರಬಿಂದೋ ಅವರು ಭಾರತೀಯ ಯುವಜನರು ಸ್ವಾತಂತ್ರ್ಯ ಚಳುವಳಿಗೆ ಸೇರಬೇಕೆಂದು ನೀಡಿದ ಕರೆಗೆ ತಕ್ಷಣವೇ ಸ್ಪಂದಿಸಿದ ಸುಭಾಷರು 1921ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಚಳುವಳಿಯತ್ತ ಸಾಗಿದರು. ಮಹಾತ್ಮ ಗಾಂಧೀಜಿ, ಚಿತ್ತರಂಜನ್ ದಾಸರು ಇವರ ಆರಂಭಿಕ ಗುರುಗಳಾದರು. 1921ರಿಂದ 1940ರವರೆಗೆ ಹನ್ನೊಂದು ಸಲ ಬಂಧಿತರಾಗಿ ಜೈಲು ಸೇರಿದರೆಂದರೆ, ಸುಭಾಷರ ಸ್ವಾತಂತ್ರ ಚಳುವಳಿಯ ತೀವ್ರ ಸ್ವರೂಪ ಮನದಟ್ಟಾಗುತ್ತದೆ! 1924ರಲ್ಲಿ ಬರ್ಮಾದ ಮಂಡಾಲೆ ಜೈಲಿನಲ್ಲಿ ಸುಭಾಶರನ್ನು ಅತ್ಯಂತ ಕಠಿಣಹಿಂಸೆಗಳಿಗೆ ಗುರಿಪಡಿಸಲಾಗಿತ್ತು. ಲಾಠಿ ಚಾರ್ಜ್‍ನ ಚಿತ್ರಹಿಂಸೆಯ ಜೊತೆಗೆ ವಿಷ ಉಣಿಸುವ ಪ್ರಯತ್ನಗಳೂ ಆಗಿದ್ದವಂತೆ. 1927ರಲ್ಲಿ ಜೈಲಿನಿಂದ ಬಿಡುಗಡೆ ಆದಾಗ ಕ್ಷಯರೋಗ ಸುಭಾಷರನ್ನು ತೀವ್ರವಾಗಿ ಆವರಿಸಿಕೊಂಡಿತ್ತು.

1933ರಲ್ಲಿ ಯೂರೋಪಿಗೆ ತೆರಳಿದ ಸುಭಾಷರು ಅಲ್ಲಿಂದ ಭಾರತದ ಸ್ವಾತಂತ್ರ್ಯ ಅಭಿಯಾನ ಆರಂಭಿಸಿದರು. ಇಂಗ್ಲೆಂಡ್, ಆಸ್ಟ್ರಿಯಾ, ಇಟಲಿ, ವಿಯೆನ್ನಾ, ಸ್ವಿಡ್ಜಲ್ರ್ಯಾಂಡ್, ಝಕೊಸ್ಲೋವೊಕಿಯಾ, ಪೋಲ್ಯಾಂಡ್, ಜರ್ಮನಿಗಳಲ್ಲೆಲ್ಲಾ ಮಿಂಚಿನ ಸಂಚಾರ ಮಾಡಿದರು. ಈ ಕಾರ್ಯಗಳ ಒತ್ತಡದಲ್ಲಿದ್ದಾಗ ಕೊಂಚ ಬಿಡುಗಡೆಯ ಭಾವ ತುಂಬುವಂತೆ 1934ರಲ್ಲಿ ವಿಯೆನ್ನಾದಲ್ಲಿ ಎಮಿಲಿ ಶೆಂಕ್ಲ್ ಅವರ ಭೇಟಿಯಾಯಿತು. ಎಮಿಲಿ ಅವರ ಕ್ರಮಬದ್ಧ ಯೋಚನೆಗಳು, ಖಚಿತವಾದ ನಿಲುವುಗಳು ಮತ್ತು ಇಂಗ್ಲಿಷ್ ಭಾಷಾಪ್ರಭುತ್ವ ಸುಭಾಷರನ್ನು ಆಕರ್ಷಿಸಿತು. ಸುಭಾಷರ ಸತ್ವಪೂರ್ಣ ಕೃತಿ “ದ ಇಂಡಿಯನ್ ಸ್ಟ್ರಗಲ್” ಪುಸ್ತಕರಚನೆಯಲ್ಲಿ ಎಮಿಲಿ ಅವರ ಪೂರ್ಣ ಸಹಕಾರವಿತ್ತು. ಆದರೆ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕುರಿತಂತೆ ಅಮೂಲ್ಯ ವಿಚಾರ ಮಾಹಿತಿಗಳನ್ನು ಒಳಗೊಂಡ ಈ ಕೃತಿ ಪ್ರಕಟವಾದರೆ ಸಾರ್ವಜನಿಕರು ಉದ್ವೇಗಗೊಳ್ಳುವ ಎಂಬ ಕಾರಣದಿಂದ ಬ್ರಿಟಿಷರು ಈ ಕೃತಿ ಪ್ರಕಟಣೆಯನ್ನೇ ನಿಷೇಧಿಸಿದರು.

1938ರಲ್ಲಿ ಕಾಂಗ್ರೆಸ್‍ನ ಅಖಿಲಭಾರತ ಅಧಿವೇಶನದ ಅಧ್ಯಕ್ಷ ಪದವಿಯು ಸುಭಾಷರ ಮನದಾಳದ ಮಾತುಗಳನ್ನು ಹೊರಚಿಮ್ಮಿಸುವ ವೇದಿಕೆಯಾಯಿತು. ಈ ಐತಿಹಾಸಿಕ ಅಧಿವೇಶನದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯ ಬಗೆಗೆ ಅತ್ಯಂತ ಸ್ಪಷ್ಟವಾಗಿ, ನಿಖರವಾಗಿ ತಮ್ಮ ಭಾಷಣದಲ್ಲಿ ಸುಭಾಷರು ಸೂಚನೆ ನೀಡಿದರು. ಆದರೆ ಅದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟದ ನೇತಾರರು ಲಕ್ಷಿಸಲಿಲ್ಲ. ಮುಂದೆ ಸುಭಾಷರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೂ ಕಾಂಗ್ರೆಸ್ ಒಳಗಿನ ಅಸಮಾಧಾನದ ಹೊಗೆಗೆ ಬೇಸತ್ತು ರಾಜೀನಾಮೆ ನೀಡಿ `ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು. ಈ ಹೊತ್ತಿಗೆ ಸುಭಾಷರು ಭಾರತೀಯ ರಾಷ್ಟ್ರನಾಯಕರಲ್ಲಿ ಒಬ್ಬರೆಂದು ಮಾನ್ಯರಾಗಿದ್ದರು.

1940ರಲ್ಲಿ ಬ್ರಿಟಿಷರು ಸುಭಾಷರನ್ನು ‘ಕ್ರಾಂತಿಕಾರಿಯೆಂದು’ ಕಪ್ಪುಪಟ್ಟಿಗೆ ಸೇರಿಸಿ ಜೈಲಿಗೆ ಹಾಕಿದರು. ಇದನ್ನು ಪ್ರತಿಭಟಿಸಿ 10 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದಾಗ ಸುಭಾಷರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಇವರು ಜೈಲಿನಲ್ಲಿಯೇ ಮೃತಪಟ್ಟರೆ ಭಾರತೀಯರ ಮನಸ್ಥಿತಿ ಹದಗೆಡುತ್ತದೆಂದು ಭಾವಿಸಿದ ಬ್ರಿಟೀಷರು ಸುಭಾಷರನ್ನು ಗೃಹಬಂಧನದಲ್ಲಿರಿಸಿದರು. ಗೃಹಬಂಧನದಿಂದ ನಾಟಕೀಯ ರೀತಿಯಲ್ಲಿ ಪಾರಾದ ಸುಭಾಷರು 1941ರ ಜನವರಿಯಲ್ಲಿ ಬರ್ಲಿನ್‍ಗೆ ಸಾಗಿ ಅಲ್ಲಿ ‘ಫ್ರೀ ಇಂಡಿಯಾ’ ಕಾರ್ಯಾಚರಣೆಗೆ ಭದ್ರವಾದ ಅಡಿಪಾಯ ಹಾಕಿದರು. ಇದೇ ವರ್ಷದ ನವೆಂಬರ್ ಎರಡರಂದು ‘ಫ್ರೀ ಇಂಡಿಯಾ ಸೆಂಟರ್’ ಉದ್ಘಾಟನೆಯಾಯಿತು. ‘ಆಜಾದ್ ಹಿಂದ್’ ಲಾಂಛನ, ‘ಜೈಹಿಂದ್’ ಘೋಷಣೆ ಮತ್ತು ಸುಭಾಷರಿಗೆ `ನೇತಾಜಿ’ ಬಿರುದುಗಳು ಈ ಸಮಯದಲ್ಲಿ ಒದಗಿ ಬಂದವು.

ಎಮಿಲಿ ಶಂಕ್ಲ್ ಅವರ ಜೊತೆಗೆ ಸುಭಾಷರಿಗೆ ನಿರಂತರ ಒದಗಿ ಬಂದ ಸಾಂಗತ್ಯ ಇಬ್ಬರಲ್ಲೂ ಪ್ರೇಮದ ಅಂಕುರವನ್ನುಂಟುಮಾಡಿತ್ತು. ಸುಭಾಷ್ ಚಂದ್ರಬೋಸರ ಸಾಮಾಜಿಕ, ರಾಜಕೀಯ ಜೀವನದ ಒಳ-ಹೊರಗುಗಳನ್ನೆಲ್ಲಾ ಆದ್ಯಂತವಾಗಿ ಅರಿತಿದ್ದ ಎಮಿಲಿ ಸುಭಾಷರಿಗೆ ಅಂತ:ಸ್ಪೂರ್ತಿಯ ಪ್ರೇರಣೆಯಾಗಿದ್ದರು. ಆದರೆ ಸುಭಾಷ್ ಮತ್ತು ಎಮಿಲಿ ಇಬ್ಬರ ಸಾಮಾಜಿಕ ಪರಿಸ್ಥಿತಿಗಳು ತುಂಬಾ ಸೂಕ್ಷ್ಮವಾಗಿದ್ದವು. ಸುಭಾಷ್‍ಚಂದ್ರ ಬೋಸ್‍ರ ಚಟುವಟಿಕೆಗಳನ್ನು ಹತ್ತಿಕ್ಕಲು ಗೂಢಚರರ ದಂಡೇ ಅವರ ಬೆನ್ನು ಹತ್ತಿತ್ತು. ಆಸ್ಟ್ರೀಯಾದ ಹೆಣ್ಣುಮಗಳಿಗೆ ವಿದೇಶಿಯನನ್ನು ಮದುವೆಯಾಗುವುದೂ ಕಷ್ಟವಿತ್ತು. ಇಂತಹ ಕಾರಣಗಳಿಂದ 1942ರ ಜನವರಿಯಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಎಮಿಲಿ ಗುಟ್ಟಾಗಿ ಹಿಂದೂ ಸಂಪ್ರದಾಯದಂತೆ ಮದುವೆ ಆದರು.

ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿ ಕೊಡಲೇಬೇಕೆಂಬ ಸುಭಾಷರ ಹಠವನ್ನು ನಿರಂತರ ಗೌರವಿಸಿದ ಎಮಿಲಿ ವಿವಾಹದ ನಂತರವೂ ಸುಭಾಷರ ಪ್ರತಿಯೊಂದು ಕಾರ್ಯವನ್ನು ಅಭಿಮಾನಿಸುತ್ತ ಸುಭಾಷರು ಸಾರ್ವಕಾಲಿಕ ಯೋಧರಾಗಿರುವುದನ್ನೇ ಉತ್ತೇಜಿಸಿದರು. ಸ್ವತಂತ್ರ ಮನೋಭಾವದ ಎಮಿಲಿ ತಮ್ಮದೇ ಆದ ತತ್ವಗಳಿಗೆ ಬದ್ಧರಾದ ಗಟ್ಟಿಗಿತ್ತಿ. ಅನಾರೋಗ್ಯದ ತಾಯಿಯ ಹೊಣೆಯ ಜೊತೆಗೆ ಕ್ರಾಂತಿಕಾರಿ ವಿದೇಶಿ ಪತಿಯನ್ನು ಸಂಬಾಳಿಸುವ ಗುರುತರ ಜವಾಬ್ದಾರಿಯನ್ನು ಅತ್ಯಂತ ಜತನದಿಂದಲೇ ನಿಭಾಯಿಸಿದರು. ಗರ್ಭಿಣಿಯಾದ ಎಮಿಲಿ ತಮ್ಮ ಪತಿಯ ಕುರುಹನ್ನೂ ಹೇಳದೆ ಮಗುವನ್ನು ಬೆಳೆಸಿಕೊಳ್ಳುವ ದುರ್ಭರ ಸನ್ನಿವೇಶವನ್ನು ಅತ್ಯಂತ ಧೈರ್ಯದಿಂದಲೇ ನಿಭಾಯಿಸಿದರು.

ವಿದೇಶಗಳಲ್ಲಿ ಹಿರಿಯ ಜಾಲವ್ಯೂಹವನ್ನು ಏರ್ಪಡಿಸಿಕೊಂಡ ಸುಭಾಷರು ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಈ ಎಲ್ಲ ವಿದ್ಯಮಾನಗಳಿಂದ ಹೌಹಾರಿದ ಬ್ರಿಟಿಷ್ ಏಜೆಂಟರು 1942 ಮಾರ್ಚ್ 24 ರಂದು ಸುಭಾಷರು ವಿಮಾನ ಅವಘಡದಲ್ಲಿ ಮೃತಪಟ್ಟರೆಂದು ಪ್ರಕಟಿಸಿದರು. ಇದು ಸುಭಾಷರ ಕುಟುಂಬಕ್ಕೆ ಎರಗಿಬಂದ ಮೊದಲನೇ ಅಘಾತ.

1942 ನವಂಬರ್ ನಲ್ಲಿ ಮಗಳು ಅನಿತಾ ಹುಟ್ಟಿದಳು. 1943 ಫೆಬ್ರವರಿಯಲ್ಲಿ ಸುಭಾಷ್ ಹಾಲುಗಲ್ಲದ ಹಸುಳೆಯನ್ನು ಮಡದಿ ವಶದಲ್ಲಿ ಬಿಟ್ಟು ಭಾರತದ ಸ್ವತಂತ್ರದೀಕ್ಷೆಯ ಕಾರ್ಯಾಚರಣೆಗೆ ಶಾಶ್ವತವಾಗಿ ಹೊರಟರು.

‘ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದ ಸುಭಾಷರ ನುಡಿಗಳು ಅಂದಿನ ಭಾರತದ ಮನೆಮಾತಾಯಿತು. ಅವರು ಕಟ್ಟಿದ ಇಂಡಿಯನ್ ನ್ಯಾಷನಲ್ ಆರ್ಮಿ ಯುವಜನತೆಯಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿ ಸ್ವಾತಂತ್ರ್ಯ ಚಳುವಳಿಗೆ ಹೊಸ ಹುಮ್ಮಸ್ಸು ತುಂಬಿತು. ‘ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು’; ‘ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ ಒಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕು’; ‘ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಎರಡೂ ಬಹುದೊಡ್ಡ ಅಪರಾಧ’; ‘ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವಾತಂತ್ರ ಪಡೆಯಲಿದೆ.’

ಇಂಥ ನುಡಿಗಳ ಸಿಡಿಲಬ್ಬರದ ಸುಭಾಷರು 1945 ಆಗಸ್ಟ್ 18 ರಂದು ತೈವಾನಿನ ಥೈಪೆಯಲ್ಲಿ ವಿಮಾನ ಅಪಘಾತದಲ್ಲಿ ಸಿಲುಕಿ ಪ್ರಾಣತೆತ್ತರು ಎಂಬ ಸುದ್ದಿ ಮಡದಿ, ಮಗಳು, ಅವರ ಕುಟುಂಬಕ್ಕಷ್ಟೇ ಅಲ್ಲ ಭಾರತೀಯರ ಪಾಲಿಗೇ ತೀವ್ರ ಆಘಾತವಾಗಿತ್ತು. ಭಾರತದಲ್ಲಿ ಸ್ವಾತಂತ್ರ್ಯ ಸೂರ್ಯನನ್ನು ನೋಡಲೇಬೇಕೆಂಬ ಏಕೈಕ ಹಂಬಲದಿಂದ ಹಗಲಿರುಳು ಹಂಬಲಿಸಿದ ಅದಮ್ಯ ಚೈತನ್ಯವೊಂದರ ಹಠಾತ್ ಕಣ್ಮರೆಯನ್ನು ಅರಗಿಸಿಕೊಳ್ಳಲು ಭಾರತಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಈಗಲೂ ಆ ಮಹಾನ್ ನೇತಾರನ ಅಂತಿಮ ಕ್ಷಣಗಳು ಹೇಗಿದ್ದಿರಬಹುದು ಎಂಬ ಊಹೆಗಳು, ಸಿದ್ಧಾಂತಗಳು, ಆಲೋಚನೆಗಳು ನಿರಂತರವಾಗಿವೆ.

ಸುಭಾಷರು ಕಣ್ಮರೆಯಾದ ಎರಡು ವರ್ಷಗಳಲ್ಲಿ ಮತ್ತಷ್ಟು ತ್ಯಾಗ, ಬಲಿದಾನ, ಆಹುತಿಗಳಿಂದ ಭಾರತ ಸ್ವಾತಂತ್ರ್ಯ ಪಡೆಯಿತು. ಆದರೆ ಸುಭಾಷರ ಕುಟುಂಬಕ್ಕೆ ನೋವು ಯಾತನೆಗಳೇ ಶಾಶ್ವತವಾದುವು.

1938-39 ರ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ವೀರ ಸಾವರ್ಕರ್, ಜಗಜೀವನ ರಾಮ್, ಸರೋಜಿನಿ ನಾಯ್ಡು, ಕ್ಯಾಪ್ಟನ್ ಲಕ್ಷ್ಮೀ ಮುಂತಾದ ಮಹನೀಯರ ಜೊತೆಗೂಡಿ ಕಡೂರಿಗೆ ಬಂದು ವಿಜಯಲಕ್ಷ್ಮಿ ಟಾಕೀಸಿನ ಬಳಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಸಭೆ ಮಾಡಿದುದನ್ನು ಮಚ್ಚೇರಿಯ ಶ್ರೀ ಎಂ.ಎಸ್. ವೆಂಕಟೇಶ ಅಯ್ಯಂಗಾರ್ ಸ್ಮರಿಸಿಕೊಂಡಿದ್ದಾರೆ. ಅಂದಿನ ನೇತಾಜಿಯವರ ಹಿಂದಿ ಭಾಷಣವನ್ನು ಭೂಪಾಳಂ ಚಂದ್ರಶೇಖರಯ್ಯನವರು ಕನ್ನಡಕ್ಕೆ ಅನುವಾದಿಸಿ ಹೇಳಿದಾಗ ‘ಭಾರತ ಮಾತಾಕೀ ಜೈ’ ಎಂದು ಮೊಳಗಿದ ಜಯಘೋಷ ಈಗ ತೊಂಬತ್ತೈದು ವರ್ಷದ ಅವರ ಕಿವಿಗಳಲ್ಲಿ ಅನುರಣಿತ ಆಗುತ್ತಲೇ ಇದೆ. ಆಗ ನೇತಾಜಿ ಹಾಡಿದ ಗೀತೆ,

‘ಬಾ ಹಿಂದೂವೀರ
ಭಿನ್ನ ಭಾವ ಬಿಟ್ಟು ಬಾರಯ್ಯ
ಭಾರತಾಂಬೆ
ಸೌಖ್ಯಕ್ಕಾಗಿ ಎದ್ದು ನಿಲ್ಲಯ್ಯ…’

ಹಿಂದೀ ಗೀತೆಯ ಅನುವಾದ ನೆರೆದವರಲೆಲ್ಲಾ ರಸರೋಮಾಂಚನ ಉಂಟು ಮಾಡಿದುದನ್ನು ನೆನೆದರೆ ಈಗಲೂ ಅವರ ಮೈ ನವಿರೇಳುತ್ತದೆ. ನೇತಾಜಿಯವರು ಕತ್ತಿಯಿಂದ ತಮ್ಮ ಹೆಬ್ಬೆರಳಿಗೆ ಹೊಡೆದುಕೊಂಡು ಜಿನುಗಿದ ರಕ್ತದಿಂದ ಬಿಳಿ ಹಾಳೆಯ ಮೇಲೆ ಸಹಿ ಮಾಡಿಕೊಟ್ಟದ್ದು, “ಭಾರತದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡುವ ಪ್ರತಿಜ್ಞೆಯನ್ನು ರಕ್ತದಲ್ಲಿ ಸಹಿ ಮಾಡಿ ಕೈಗೊಳ್ಳಿ. ಬ್ರಿಟಿಷರನ್ನು ಭಾರತದಿಂದ ತೊಲಗಿಸಿ” ಎಂದ ಘರ್ಜನೆಗೆ ಜನತೆ ಮಾಡಿದ ಜಯಕಾರದ ಧ್ವನಿ ಸದಾ ಸ್ಮರಣೀಯವಾಗಿದೆ. ಸುಭಾಷ್ ಚಂದ್ರ ಬೋಸರ ಚಿಕ್ಕಮಗಳೂರು ಜಿಲ್ಲೆಯ ಇಂತಹ ಅಮೂಲ್ಯ ದಾಖಲೆಗಳನ್ನು ತಮ್ಮ ತಂದೆಯವರ ನೆನಪಿನಿಂದ ಹೆಕ್ಕಿಕೊಟ್ಟಿರುವ ಶ್ರೀ ಬಾಲುಮಚೇರಿಯವರ ಅಭಿಮಾನವೂ ದೊಡ್ಡದು.

ಸನ್ಮಾನ್ಯ ಸುಭಾಷಚಂದ್ರ ಬೋಸರಂತಹ ಸಹಸ್ರಸಹಸ್ರ ದೇಶಭಕ್ತರ ತ್ಯಾಗ, ಬಲಿದಾನಗಳ ಅಡಿಪಾಯದಲ್ಲಿ ಕಟ್ಟಿರುವ ಸ್ವಾತಂತ್ರ್ಯಸೌಧ ನಮ್ಮದು. ಇವರ ತ್ಯಾಗ ಬಲಿದಾನಗಳನ್ನು ನಿರಂತರ ನೆನೆಯಲು ಅವರ ಹೆಸರಿನ ಶಾಶ್ವತ ಕುರುಹುಗಳನ್ನು ನಿರ್ಮಿಸುತ್ತಿದ್ದೇವೆ. ಚಿಕ್ಕಮಗಳೂರಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರ ಸ್ಮರಣೆಗೆ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಜಿಲ್ಲಾ ಆಟದ ಮೈದಾನ ಮುಂತಾದ ಸ್ಮರಣೆಗಳಿವೆ. ಈ ಮೂಲಕ ನೇತಾಜಿ ಅವರ ಹೆಸರನ್ನು ಚಿಕ್ಕಮಗಳೂರಿನ ಸರ್ವರೂ ನಿತ್ಯ ಸ್ಮರಿಸುತ್ತಿದ್ದಾರೆ.

ಸುಭಾಷರ ಮಹಾನ್ ಶೌರ್ಯ, ಬಲಿದಾನ ಪರಾಕ್ರಮಗಳು ಭಾರತೀಯರ ಮನದಲ್ಲಿ ನಿರಂತರವಾಗಿರಲೆಂಬ ಆಶಯದಿಂದ ಅವರ ಜನುಮದಿನವನ್ನು ‘ಪರಾಕ್ರಮ ದಿನ’ ಎಂದು ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ. ಸುಭಾಷರ ಭಾವ ಸ್ಮರಣೆ ಭಾರತೀಯರ ಮನದಲ್ಲಿ ನಿತ್ಯವಾಗಲಿ.

-ಡಾ. ಮಂಜುಳಾ ಹುಲ್ಲಹಳ್ಳಿ.