ನಿಸರ್ಗದ ಗುರತ್ವಾಕರ್ಷಕ ಶಕ್ತಿ ಮತ್ತು ಕೇಶಾಕರ್ಷಕ ಶಕ್ತಿಯ ಕಾರ್ಯಕ್ಕೆ ಎರೆಹುಳು ಸಹವರ್ತಿಯಾಗಿದೆ.

ನೈಸರ್ಗಿಕ ಕೃಷಿಯ ಯಶಸ್ಸು ನಿಂತಿರುವುದು ಎರೆಹುಳುವಿನ ಮೇಲೆ.

ಮುಂಗಾರು ಮಳೆ ಪ್ರಾರಂಭವಾಗಿ ಉತ್ತರ ನಕ್ಷತ್ರದ ಕೊನೆ ಪಾದದವರೆಗೆ ಸುರಿಯುವ ಮಳೆಯ ನೀರು ಗುರತ್ವಾಕರ್ಷಕ ಬಲದಿಂದ ಭೂಮಿಗೆ ಇಂಗುತ್ತದೆ. ಹೀಗೆ ಇಂಗಲು ಎರೆಹುಳುವಿನ ಭೌತಿಕ ಚಟುವಟಿಕೆಯಿಂದಾದ ರಂಧ್ರಗಳು ಸಹಾಯ ಮಾಡುತ್ತವೆ.

ಉತ್ತರ ನಕ್ಷತ್ರದ ಕೊನೆಯ ಪಾದದಿಂದ ಅಂದರೆ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರ ನಿಸರ್ಗದಲ್ಲಿ ಗುರತ್ವಾಕರ್ಷಕ ಶಕ್ತಿಯಿಂದ ಕೇಶಾಕರ್ಷಕ ಶಕ್ತಿಗೆ ಋತು ಚಕ್ರ ಬದಲಾಗುತ್ತದೆ. ಈ ಸಂದರ್ಭದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಭೂಮಿಯ ಕೆಳ ಪದರಿನಿಂದ ತೇವಾಂಶ ಮೇಲ್ಮುಖವಾಗಿ ಉಕ್ಕಲು ಪ್ರಾರಂಭಿಸುತ್ತದೆ. ಈ ಸಂದರ್ಭ ಕೆಳ ಪದರಿನಲ್ಲಿ ಇರುವ ಖನಿಜಾಂಶಗಳು, ಲವಣಾಂಶಗಳು ಮತ್ತು ಪೋಷಕಾಂಶಗಳು ತೇವಾಂಶದ ಜೊತೆಗೆ ಭೂಮಿಯ ಮೇಲ್ಪದರಕ್ಕೆ ಪ್ರವಹಿಸುತ್ತವೆ.

ಗುರತ್ವಾಕರ್ಷಕ ಬಲದಿಂದ ಮೇಲಿನಿಂದ ಕೆಳಕ್ಕೆ ಇಳಿಯುವ ಪೋಷಕಾಂಶಗಳು ಕೇಶಾಕರ್ಷಕ ಬಲದಿಂದ ಕೆಳಗಿನಿಂದ ಮೇಲ್ಪದರಕ್ಕೆ ಬರುತ್ತವೆ. ಈ ನಿಸರ್ಗ ಕ್ರಿಯೆಯಿಂದ ಕಾಲಕಾಲಕ್ಕೆ ಸಸ್ಯ ಸಂಕುಲಕ್ಕೆ ಬೇಕಾಗುವ ಪೋಷಕಾಂಶಗಳು ಸರಬರಾಜಾಗುತ್ತದೆ. ಈ ಕ್ರಿಯೆ ಕೋಟ್ಯಾನುಕೋಟಿ ವರ್ಷಗಳಿಂದ ನಡೆದು ಬಂದಿದೆ. ಈ ಕ್ರಿಯೆಗೆ ಎರೆಹುಳುಗಳು ಮಾಡು ರಂಧ್ರಗಳು ಸಹಕಾರಿಯಾಗಿವೆ.

ನಮ್ಮ ದೇಶೀಯ ಎರೆಹುಳುಗಳಲ್ಲಿ ಪಾಸ್ತುಮ ಮತ್ತು ಮೆಗಾಸ್ಕೊಲೆಕ್ಸ್ ಎಂಬ ಎರಡು ಪ್ರಬೇದಗಳು ಇವೆ. ಪಾಸ್ತುಮ ಎರೆಹುಳು (ಅರ್ಧ ಅಡಿಯಿಂದ ಒಂದು ಅಡಿ) ಮಣ್ಣಿನ ಮೇಲ್ಪದರಿನಲ್ಲಿ ಅಡ್ಡಡ್ಡ ಓಡಾಡುತ್ತಾ ಮಣ್ಣನ್ನು ಸಡಿಲಗೊಳಿಸುತ್ತಿರತ್ತವೆ. ಇದೇ ರೀತಿ ಮೆಗಾಸ್ಕೊಲೆಕ್ಸ್ ಪ್ರಬೇದದ ಎರೆಹುಳು 15 ರಿಂದ 25 ಅಡಿ ಆಳಕ್ಕೆ ಇಳಿಯುತ್ತದೆ. ಈ ಎರೆಹುಳು ಮಣ್ಣನ್ನು ತಿನ್ನುತ್ತಾ ರಂಧ್ರ ಮಾಡುತ್ತಾ ಹೋಗಿ ಮತ್ತದೆ ಜಾಗದಲ್ಲಿ ವಾಪಸ್ ಬರದೇ ಹೊಸ ಜಾಗದಲ್ಲಿ ರಂಧ್ರ ಮಾಡುತ್ತಾ ಬರುತ್ತದೆ.

ಎರೆಹುಳುಗಳು ರಂಧ್ರ ಮಾಡುತ್ತಾ ಸಾಗುವಾಗ ತನ್ನ ದೇಹದಿಂದ ಲೋಳೆಯಂತಹ ಅಂಟು ದ್ರವವನ್ನು ರಂಧ್ರದ ಗೋಡೆಗೆ ಲೇಪಿಸುತ್ತದೆ. ಈ ದ್ರವ್ಯದಲ್ಲಿ ಎಲ್ಲಾ ಬಗೆಯ ಬೆಳೆ ಪ್ರಚೋದಕಗಳು, ಆಲ್ಕಲೇಡ್ ಗಳು ಮತ್ತು ಎಲ್ಲಾ ಬಗೆಯ ಅಮಿನೊ ಆಸಿಡ್ ಗಳು ಇರುತ್ತವೆ. ಬೆಳೆಗಳ ಬೇರುಗಳು ರಂಧ್ರಕ್ಕೆ ತಾಕಿದಾಗ ಈ ದ್ರವ್ಯ ಬೆಳೆಯ ಬೆಳವಣಿಗೆಗೆ ನೆರವಾಗುತ್ತದೆ.

ಸಾಧಾರಣ ಫಲವತ್ತಾದ ಮಣ್ಣಿನಲ್ಲಿ ಎರಡು ಲಕ್ಷ ಎರೆಹುಳು ಇರುತ್ತವೆ. ಇವು (24×7) ದಿನ ನಿತ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಾ ಕಸವನ್ನು ಪೋಷಕಾಂಶಗಳನ್ನಾಗಿ ಪರಿವರ್ತಿಸುವ ಇವುಗಳಿಗೆ ನಿಸರ್ಗದ ನೆಗಿಲು ಎಂದು ಕರೆಯಲಾಗುತ್ತದೆ. ಜೊತೆಗೆ ರೈತ ಮಾಡುವ ಉಳುಮೆಗಿಂತ ಭಿನ್ನವಾಗಿ ಉಳುಮೆ ಮಾಡುವ ಮೂಲಕ ಮತ್ತು ಬೆಳೆಗೆ ಬೇಕಾದ ಗೊಬ್ಬರವನ್ನು ಇವುಗಳೇ ಕೊಡುವುದರ ಮೂಲಕ ರೈತನಿಗೆ ನೆರವಾಗುತ್ತವೆ. ಈ ಕಾರಣಕ್ಕೆ ರೈತ ಮಿತ್ರ ಎಂದು ಕರೆಯಲಾಗುತ್ತದೆ.

ಆಧುನಿಕ ಕೃಷಿ ಸ್ವಚ್ಛ ಬೇಸಾಯಕ್ಕೆ ಶಿಫಾರಸ್ಸು ಮಾಡಲು ಮುಂದಾದ ಮೇಲೆ ನಿಸರ್ಗದ ಒಂದು ಅಂಗವಾಗಿದ್ದ ಎರೆಹುಳುಗಳು ಬದುಕಲಾಗದೆ 15 ಅಡಿ ಆಳದಲ್ಲಿ ನೆಲೆ ಕಂಡುಕೊಂಡವು ಇವುಗಳು ಇಡುವ ಮೊಟ್ಟೆಗಳು ಸುರಕ್ಷತೆ ಇಲ್ಲದ ಕಾರಣ ಮರಿಗಳಾಗಿ ಹೊರ ಬರದೆ ಸುರಕ್ಷಿತ ವಾತಾವರಣದ ನಿರೀಕ್ಷೆಯಲ್ಲಿ ಹಲವು ವರ್ಷಗಳ ಕಾಲ ಕಾಯುತ್ತಿರುತ್ತವೆ. ವಿಷಮುಕ್ತವಾದ ಕೃಷಿ ಆರಂಭಗೊಂಡು ಜೀವಾಮೃತ ಮಣ್ಣಿಗೆ ಸೋಕಿದ ಒಂದೆರಡು ತಿಂಗಳುಗಳಲ್ಲಿ ಬದುಕುಳಿದ ಎರೆಹುಳುಗಳು ಮತ್ತು ಮೊಟ್ಟಗಳಿಂದ ಮರಿಗಳು ಹೊರ ಬಂದು ತಮ್ಮ ಕಾಯಕವನ್ನ ಆರಂಭಿಸುತ್ತವೆ.

ಎರೆಹುಳುಗಳು ನಮ್ಮ ಕೃಷಿ ಭೂಮಿಯಲ್ಲಿ ಸುರಕ್ಷಿತವಾಗಿ ಇರಲು ಸೂಕ್ತ ವಾತಾವರಣ ನಿರ್ಮಾಣ ಮಾಡಿಕೊಡ ಬೇಕು. ನೆರಳು ಮತ್ತು ಕತ್ತಲೆಯಲ್ಲಿ ಎರೆಹುಳುಗಳು ಕ್ರಿಯಾ ಶೀಲವಾಗಿರುತ್ತವೆ. ಕೃಷಿ ಭೂಮಿಯ ಮಣ್ಣನ್ನು ಕಳೆ ಅಥವಾ ಬೆಳೆಗಳ ಮುಚ್ಚಿಗೆ, ಇಲ್ಲ ಒಣ ತ್ಯಾಜ್ಯದಿಂದ ಮುಚ್ಚಿಗೆ ಮಾಡಿದರೆ ಮಣ್ಣಿನ ಆಂತರ್ಯ ಕತ್ತಲೆಯಿಂದ ಕೂಡಿರುತ್ತದೆ. ಇದನ್ನೇ ಸುಭಾಷ್ ಪಾಳೇಕಾರ್ ಅವರು “ಸೂಕ್ಷ ಪರ್ಯಾವರಣ” ಎಂದು ಕರೆದದ್ದು . ಈ ಸೂಕ್ಷ್ಮ ಪರ್ಯಾವರಣದಲ್ಲಿ (ಮೈಕ್ರೊ ಕ್ಲೈಮೇಟ್) ಒಂದು ಎಕರೆ ಪ್ರದೇಶದಲ್ಲಿ ಸುಮಾರು 2 ಲಕ್ಷ ಎರೆಹುಳುಗಳು ಕಾರ್ಯ ನಿರ್ವಹಿಸುತ್ತ ತಮ್ಮ ಬೌತಿಕ ಮತ್ತು ಜೈವಿಕ ಕ್ರಿಯೆಯಿಂದ ಮಣ್ಣನ್ನು ಶ್ರೀಮಂತಗೊಳಿಸುತ್ತವೆ. ಎರೆಹುಳುಗಳು ನೀಡುವ ಗೊಬ್ಬರ, ರಬಸದ ಮಳೆಗೂ ಕರಗುವುದಿಲ್ಲ ಇದರಿಂದಾಗಿ ಹೊಸದಾದ ಮೇಲ್ಮಣ್ಣು ವೃದ್ಧಿಯಾಗುತ್ತದೆ.

ಎರೆಹುಳುಗಳಿಂದ ರೈತನಿಗೆ ನೈಸರ್ಗಿಕವಾಗಿ ಟನ್ ಗಟ್ಟಲೆ ಗೊಬ್ಬರ, ಉಚಿತವಾದ ಉಳುಮೆ, ನೀರಿನ ಮರುಪೂರಣ ಬೆಳೆ ಪ್ರಚೋದಕಗಳು ಮತ್ತು ಔಷಧಿಗಳು,,,, ಈ ರೀತಿ ಕೊಡುಗೆ ದೊರೆಯುತ್ತದೆ. ಇಷ್ಟೆಲ್ಲಾ ಉಪಯೋಗ ನೀಡುವ ಎರೆಹುಳುಗಳನ್ನು ಸಾಯಿಸಿ, ಹೊರ ದೇಶಗಳಿಂದ ತರಿಸಿದ ಎರೆಹುಳುಗಳಿಂದ ಗೊಬ್ಬರ ತಯಾರಿಸುವ ಯೋಜನೆಯನ್ನು ಜಾರಿಗೆ ತಂದ ನಮ್ಮ ಸರ್ಕಾರಗಳು ಇದಕ್ಕೆ ಸಹಾಯಧನ, ಪ್ರಚಾರ ಮಾಡಲು ಒಂದಿಷ್ಟು ಹಣ, ಉತ್ಪಾದನೆ ಮಾಡಲು ಕಲಿಕೆಗೆಂದು ತರಬೇತಿ ಕಾರ್ಯಗಾರಗಳು ಒಂದೆಡೆಯಾದರೆ ಮತ್ತೊಂದೆಡೆ ವರ್ಮಿ ಕಾಂಪೋಸ್ಟ್ ಎಂಬ ಬಣ್ಣ ಬಣ್ಣದ ಬ್ಯಾಗ್ ಗಳಲ್ಲಿ ತುಂಬಿ ಮಾರಾಟ ಮಾಡುವ ಉತ್ಪಾದಕ ಜಾಲಗಳು, ವಿತರಕ ವ್ಯವಸ್ಥೆ ಜೊತೆಗೆ ವ್ಯಾಪಕ ಭ್ರಷ್ಟಾಚಾರ.

ಚಂದ್ರಶೇಖರ ನಾರಣಾಪುರ.
ಕೃಷಿ ನಿವಾಸ.
ಚಿಕ್ಕಮಗಳೂರು.
9902078988