ಚಿಕ್ಕಮಗಳೂರು: ನಕಲಿ ನೋಟು ಚಲಾವಣೆ ಜಾಲವೊಂದನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ನಕಲಿ ಹಾಗೂ ಅಸಲಿ ನೋಟುಗಳು ಹಾಗೂ ಅತ್ಯಂತ ಬೆಲೆ ಬಾಳುವ ಪುರಾತನವಾದ ಕ್ಯಾಟ್-ಐ ರತ್ನದ ಹರಳೊಂದನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳಿಂದ ೫.೫೭ ಲಕ್ಷ ರೂ.ನಷ್ಟು ೫೦೦ ಮುಖಬೆಲೆಯ ನಕಲಿ ನೋಟುಗಳು ಹಾಗೂ ೫ ಲಕ್ಷ ರೂ. ಅಸಲಿ ನೋಟುಗಳು, ೩ ಕಾರು, ೫ ಮೊಬೈಲ್, ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ಮೆನ್‌ಡ್ರೈವ್, ಪೇಪರ್ ಇತ್ಯಾದಿ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಬಳಿ ಒಂದು ಅಮೂಲ್ಯವಾದ, ಪುರಾತನವಾದ ೫೧೦.೬೦ ಕ್ಯಾರೆಟ್ ಪ್ರಮಾಣೀಕೃತ ಕ್ಯಾಟ್-ಐ ರತ್ನದ ಹರಳು ಸಹ ಪತ್ತೆಯಾಗಿದ್ದು, ಅದನ್ನು ೨೦೧೯ ರಲ್ಲಿ ಶಿವಮೊಗ್ಗದ ಓರ್ವ ವ್ಯಕ್ತಿಯಿಂದ ಖರೀದಿಸುವುದಾಗಿ ಪಡೆದು ಅವರಿಗೆ ಮೋಸಮಾಡಿ ತೆಗೆದುಕೊಂಡು ಹೋಗಿದ್ದರು. ಈ ಕುರಿತು ಅಂದೇ ಶಿವಮೊಗ್ಗದ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.

ಈ ರತ್ನದ ಹರಳನ್ನು ಹೊಂದಿದ್ದ ಶಿವಮೊಗ್ಗದ ವ್ಯಕ್ತಿಯ ಅಜ್ಜನಿಗೆ ಸುಮಾರು ವರ್ಷಗಳ ಹಿಂದೆ ಮಹರಾಜರು ಕೊಡುಗೆಯಾಗಿ ನೀಡಿರುವುದಾಗಿ, ಅದರ ಅಂದಾಜು ಬೆಲೆ ೫೦ ಲಕ್ಷದಿಂದ ೧ ಕೋಟಿ ರೂ. ಆಗುತ್ತದೆ ಎಂದು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಎಸ್ಪಿ ವಿವರಿಸಿದ್ದಾರೆ.

ಇದೇ ಗ್ಯಾಂಗ್‌ನಲ್ಲಿದ್ದ ಇತರೆ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ೨೦೨೦ ರಲ್ಲಿ ಬಂಧಿಸಿ ೨.೪ ಲಕ್ಷ ಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದರು.

ಬಂಧಿತ ಆರೋಪಿಗಳ ಪೈಕಿ ಒಬ್ಬಾತ ಮನೆಗಳ ಬಳಿ ಇರುವ ನಾಯಿಗಳಿಗೆ ವಿಷ ಹಾಕಿ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ. ಪತ್ರಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪವೂ ಆತನ ಮೇಲಿತ್ತು. ಆತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ೫ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಈತ ತನ್ನ ಸಹಚರರೊಂದಿಗೆ ಸೇರಿ ಕೇರಳ ರಾಜ್ಯದಲ್ಲಿ ಉನ್ನತಮಟ್ಟದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ದರೊಡೆ ಮತ್ತು ಸುಲಿಗೆ ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದ್ದು ತನಿಖೆ ಮುಂದುವರಿದಿದೆ.

ಇತ್ತಿಚೆಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆ ವೃತ್ತನಿರೀಕ್ಷಕ ಎ.ಕೆ.ರಕ್ಷಿತ್ ಮತ್ತು ತಂಡ ಭಾಗವಹಿಸಿದೆ. ತಂಡಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರು ಬಹುಮಾನ ಘೊಷಿಸಿದ್ದಾರೆ ಎಂದು ತಿಳಿಸಿರುವ ಎಸ್ಪಿ ಅಕ್ಷಯ್, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳ ಹೆಸರು, ಪೂರ್ಣ ವಿವರ ಬಹಿರಂಗಪಡಿಸಲಾವುದಿಲ್ಲ ಎಂದು ತಿಳಿಸಿದ್ದಾರೆ.