ಖ್ಯಾತ ಸಾಹಿತಿ ಆಶಾ ರಘು ಅವರ ಮಾಯೆ ಪುಸ್ತಕ ಬಿಡುಗಡೆಯಾದ ಶುಭ ಸಂದರ್ಭದಲ್ಲಿ ಅವರ ಸಮಗ್ರ ಕೃತಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ. ಮೂರು ಕಾದಂಬರಿಗಳು, ಎರಡು ಕಥಾಸಂಕಲನಗಳು, ಒಂದು ಅತಿಸಣ್ಣ ಕಥೆಗಳ ಸಂಗ್ರಹ, ಎರಡು ನಾಟಕಗಳು ಸೇರಿ ಒಟ್ಟು ಎಂಟು ಪುಸ್ತಕಗಳ ಸಂಗ್ರಹ ಇದೀಗ ಸಾಹಿತ್ಯಲೋಕ ಪಬ್ಲಿಕೇಷನ್ಸ್‌ನಿಂದ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಎಂಟು ಪುಸ್ತಕಗಳ ಮುಖಬೆಲೆ 1610 ರೂಪಾಯಿ. ಆದರೆ ಈಗ ರಿಯಾಯ್ತಿಯ ನಂತರ 1370 ರೂಪಾಯಿಗೆ ಲಭ್ಯವಿದೆ. ಅಂಚೆ ವೆಚ್ಚ ಉಚಿತ. ಪುಸ್ತಕ ಬೇಕಾದವರು ಮೊಬೈಲ್ 99459 39436 ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು.

ಮಾಯೆ ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ.ಕೆ.ಎನ್ ಗಣೇಶಯ್ಯ ಬರೆದಿರುವ ಬೆನ್ನುಡಿ ಕನ್ನಡ ಸಹೃದಯರ ಗಮನ ಸೆಳೆದಿತ್ತು. ‘ಕನ್ನಡನಾಡಿ’ ಜಾಲತಾಣದ ಓದುಗರಿಗಾಗಿ ಬೆನ್ನುಡಿಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ, ಇದರ ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು ಸತ್ಯವೆಂದರೆ ಆ ಮೂರೂ ಆಸೆಗಳನ್ನು ತೊರೆದ ಜೀವಕ್ಕೆ ಆಹ್ಲಾದಕರ ಆನಂದದ ಜೊತೆಗೆ ಪಾರಮಾರ್ಥಿಕ ಸುಖವೂ ದೊರೆಯುತ್ತದೆ ಎನ್ನುವುದು. ಈ ಎರಡೂ ಸತ್ಯಗಳನ್ನು ನಿರೂಪಿಸಲೆಂದೆ ಆಶಾ ರಘು ಅವರು ಈ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆಯೇ ಎಂಬ ಅನಿಸಿಕೆ ಓದುಗರಲ್ಲಿ ಮೂಡುವುದು ಖಂಡಿತ, ಅಷ್ಟರಮಟ್ಟಿಗೆ ಈ ಕಾದಂಬರಿಯ ರಚನೆ ಮತ್ತು ಉದ್ದೇಶ ಸಫಲಗೊಂಡಿದೆ ಎನ್ನುವುದೂ ಖಚಿತ.

ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಬೆಳೆಯುವ ಕಥಾಹಂದರವು ಪಾತ್ರಗಳ ನೆನಪುಗಳ ಸರಮಾಲೆಯಾಗಿಯೇ ಓದುಗನಿಗೆ ತೆರೆದುಕೊಳ್ಳುವುದು ಈ ಕಾದಂಬರಿಯ ಒಂದು ವಿಶೇಷ, ಬಲವಂತದಲ್ಲಿ ಪ್ರೀತಿಯನ್ನು ಪಡೆಯುವ ಛಲ ನಿಧಿಯ ಬೇಟೆ, ಆಸ್ತಿಯ ಆಸೆ, ಸಿಂಹಾಸನದ ಉತ್ತರಾಧಿಕಾರಿಯ ಜನ್ಮ ರಹಸ್ಯ ಮುಂತಾದ ಹೆಗ್ಗುರುತುಗಳಿಗೆ ಓದುಗನನ್ನು ಕಟ್ಟಿಹಾಕಿ, ಆ ಹೆಗ್ಗುರುತುಗಳ ನಕ್ಷೆಯೊಳಗೆ ಕತೆಯನ್ನು ಬೆಳೆಸುತ್ತಾರೆ ಆಶಾ,

ಕಥಾನಾಯಕ ಅತಿಯಾಗಿ ಪ್ರೀತಿಸಿದ ಬಾಲ್ಯದ ಪ್ರೇಯಸಿಯು ವಿಧಿಯ ಕೈಚಳಕದಿಂದ ದೂರವಾದ ನಂತರ ಆಕೆಯ ಸ್ಥಾನದಲ್ಲಿ ನೆಲೆಯಾದ ಮತ್ತೊಂದು ಹೆಣ್ಣು ಅವನ ನೈತಿಕ ಸಮತೋಲನವನ್ನು ಸಂಪೂರ್ಣವಾಗಿ ಕದಡಿ ಅವನಲ್ಲಿ ‘ಮಾನವ ಸಹಜ’ ದುರಾಸೆಗಳನ್ನು ಆಳವಾಗಿ ಬಿತ್ತಿ ಬೆಳೆಸುತ್ತಾಳೆ: ಪರಿಣಾಮವಾಗಿ, ತನ್ನದಲ್ಲದ ಮಣ್ಣನ್ನು ಕಬಳಿಸಿ, ಪರರ ಹೊನ್ನಿಗೆ, ಹೆಣ್ಣಿಗೆ ಕೈ ಚಾಚಿದ ಅವನ ಜೀವನ ಕೊನೆಗೆ ಸುಂಟರಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ. ಅಮಾನವೀಯ ಕೃತ್ಯಗಳಿಗೆ ಕನ್ನಡಿ ಹಿಡಿಯುವಂತೆ ಸೃಷ್ಟಿಸಲಾಗಿರುವ ಮತ್ತೊಂದು ಪಾತ್ರದ ಅಮಾಯಕ ವ್ಯಕ್ತಿ, ತಾನು ವಾರಸುದಾರನಾಗಿದ್ದ ಹೊನ್ನನ್ನೂ, ಅಧಿಕಾರವನ್ನೂ ದೂರ ತಳ್ಳಿ, ಸ್ನೇಹಕ್ಕೆ ಸತ್ಯಕ್ಕೆ ಜೋತುಬಿದ್ದ ಕಾರಣ, ಸರಳವಾದರೂ ಸುಂದರ ಹಾಗೂ ಆನಂದಮಯ ಜೀವನ ಸಾಗಿಸುತ್ತಾನೆ.

ಒಟ್ಟಿನಲ್ಲಿ, ಸುಖವು ಸುತ್ತಲೂ ಇದ್ದರೂ ಅದನ್ನು ಗ್ರಹಿಸದೆ ಮತ್ತೆಲ್ಲೋ ಅದು ಸಿಗುತ್ತದೆ ಎಂಬ ಭ್ರಮೆಯ ‘ದೂರ ತೀರಕೆ ಕರೆದೊಯ್ಯುವ ‘ಮೋಹನ(ದ) ಮುರುಳಿ’ ಯ ಕರೆಗೆ ಬಲಿಯಾಗುವ ಎಲ್ಲ ಮನಸುಗಳಿಗೆ ಎಚ್ಚರಿಕೆಯ ಕರೆಘಂಟೆಯಂತೆ ಆಶಾ ಅವರ ಈ ಕಾದಂಬರಿ ಮೂಡಿ ಬಂದಿದೆ.

Kannada Literature Special Discount for Writer Asha Raghu Books

Asha-Raghu-Books
ಆಶಾರಘು ಅವರ ಪುಸ್ತಕಗಳು

ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್: ಮರೆಯಬಾರದ ಮಹಾನ್ ತೇಜಸ್ಸು!!!
ಇದನ್ನೂ ಓದಿ: ಚಿಕ್ಕಮಗಳೂರು ನೆಲೆ-ಬೆಲೆ ಪುಸ್ತಕ ಬಿಡುಗಡೆ