ಮುಂಬಯಿ: ೧೫ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ೩೦ಕ್ಕೂ ಹೆಚ್ಚಿನ ಕಾಮುಕರಿಂದ ಅತ್ಯಾಚಾರ ನಡೆದಿರುವ ಘಟನೆಯೊಂದು ವರದಿಯಾಗಿದೆ.

ಕಳೆದ ೯ ತಿಂಗಳ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಬಾಲಕಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಮೊದಲು ತನ್ನ ಸ್ನೇಹಿತನಿಂದಲೇ ಅತ್ಯಾಚಾರ ನಡೆಸಿ ವಿಡಿಯೋ ಮಾಡಲಾಗಿತ್ತು. ಆತ ಬಾಲಕಿಯನ್ನು ಬ್ಲ್ಯಾಕ್‌ಮೇಲ್‌ ಮಾಡತೊಡಗಿದ. ಬೆದರಿಕೆ ಹಾಕಿ, ಪದೇ ಪದೆ ಅತ್ಯಾಚಾರ ಎಸಗಿದ್ದ. ನಂತರ ಅತ್ಯಾಚಾರದ ವಿಡಿಯೋವನ್ನು ತನ್ನ ಇತರೆ ಸ್ನೇಹಿತರ ಜತೆ ಹಂಚಿಕೊಂಡಿದ್ದ. ಆ ವಿಡಿಯೋ ಇಟ್ಟುಕೊಂಡು ಉಳಿದ ಕಿಡಿಗೇಡಿಗಳು ಇದೇ ಕೆಲಸ ಮಾಡಿದ್ದು ತಿಳಿದು ಬಂದಿದೆ.

ಬುಧವಾರ ಬಾಲಕಿ ದೈಹಿಕವಾಗಿ ಜರ್ಜರಿತಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಕೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, 24 ದುಷ್ಕರ್ಮಿಗಳನ್ನು ಸೆರೆ ಹಿಡಿದರು. ‘ಆ ಎಲ್ಲಾ ಆರೋಪಿಗಳು ಬಾಲಕಿಗೆ ಪರಿಚಯ ಇರುವವರೇ ಆಗಿದ್ದಾರೆ” ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮುಂಬಯಿ ವಿವಿಧ ಸ್ಥಳಗಳಲ್ಲಿ ಕನಿಷ್ಠ ಆರು ಬಾರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿ ೨೪ ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ ೩೭೬(ಅತ್ಯಾಚಾರ), ೩೭೬(ಎನ್‌), ೩೭೬(೩), ೩೭೬(ಡಿ) (ಎ) ಹಾಗೂ ಸೆಕ್ಷನ್‌, ೪, ೬ ಹಾಗೂ ೧೦ ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ದಾಖಲು ಮಾಡಲಾಗಿದೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಕಾರ್ಯಕರ್ತರು ಮಾನ್ಸಡೆ ಪೊಲೀಸ್‌ ಠಾಣೆಯ ಹೊರಗೆ ಭಾರೀ ಸಂಖ್ಯೆಯಲ್ಲಿ
ಪ್ರತಿಭಟನೆ ನಡೆಸಿದ್ದರು.

ಹೀಗಾಗಿ ಪೊಲೀಸ್‌ ಠಾಣೆಯ ಹೊರಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಪ್ರಾಪ್ತ ಬಾಲಕಿಗೆ ಕಲ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.