ವಾಷಿಂಗ್ಟನ್​: ಕುಜ ಗ್ರಹ ಮಾನವರಿಗೆ ಯಾವಾಗಲೂ ಕೌತುಕದ ಕಣಜ. ಅನಾದಿ ಕಾಲದಿಂದಲೂ ಮನುಷ್ಯ ಇದರ ಬೆನ್ನಿಗೆ ಬಿದ್ದಿದ್ದಾನೆ. ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದ್ದಾನೆ. ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಅಂಗಾರಕನಲ್ಲಿ ನದಿ ಇದ್ದ ಕುರುಹುಗಳ ಅಧ್ಯಯನವನ್ನು ನಡೆಸುತ್ತಿದೆ. ಇದಕ್ಕೆ ಆಧಾರ ನೀಡಿದ್ದು ಮಂಗಳನಂಗಳದಲ್ಲಿ ಪರ್ಯಟನೆ ನಡೆಸುತ್ತಿರುವ “ಪಸಿರ್ವಿಯರೆನ್ಸ್​’ ರೋವರ್​. ಇದು ಇತ್ತೀಚೆಗೆ ಕಳುಹಿಸಿದ ಚಿತ್ರದಲ್ಲಿ ಕೆಂಪು ಗ್ರಹದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ನದಿ ಹರಿದಿದ್ದ ಮತ್ತು ಜೀವಿಗಳು ಇದ್ದಿರುವ ಸಾಧ್ಯತೆಯ ಸುಳಿವನ್ನು ನೀಡಿದೆ. ಇದು ಅಧ್ಯಯನಕಾರರ ಆಸಕ್ತಿಯನ್ನು ಹೆಚ್ಚಿಸಿದೆ.

ಇತ್ತೀಚೆಗೆ ರೋವರ್​ ಮಂಗಳನ ಜೆಜೆರೊ ಕುಳಿಯ ಹೊಸ ಚಿತ್ರಗಳನ್ನು ಕಳುಹಿಸಿದ್ದು, ಇದರಲ್ಲಿ ಫ್ಯಾನ್​ ಆಕಾರದ ಕೆಸರಿನ ರಚನೆಗಳು ಕಂಡುಬಂದಿವೆ. ಹೈ ರೆಸಲ್ಯೂಷನ್​ ಚಿತ್ರದಲ್ಲಿ ಬಂಡೆಗಳಂತಹ ರಚನೆಗಳು ಕಾಣಿಸಿವೆ. ಹೀಗಾಗಿ ಜೆಜೆರೊ ಹಿಂದೆ ನದಿಯನ್ನು ಆಶ್ರಯಿಸಿದ್ದ ಸರೋವರ ಇದ್ದಿರಬಹುದು. 370 ಕೋಟಿ ವರ್ಷಗಳ ಹಿಂದೆ ಇಲ್ಲಿ ಸುಸ್ಥಿರವಾಗಿ ನೀರು ಹರಿದಿರಬಹುದು ಎಂಬ ಶಂಕೆ ಇದೆ ಎಂದು ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ.

ರೋವರ್​ ಕಳುಹಿಸಿರುವ ಚಿತ್ರದಲ್ಲಿ ಮೂರು ಪದರದ ರಚನೆ ಇದ್ದು, ಮೊದಲ ಪದರದ ರಚನೆಯು ನದಿ ಪ್ರವಾಹದಿಂದ ಉಂಟಾಗಿರಬಹುದು. ಕೊನೆಯ ಪದರದಲ್ಲಿರುವ ನುಣುಪಾದ ಅವೆಮಣ್ಣು ಜೀವಿಗಳು ಇದ್ದಿರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಇಂತಹದ್ದೆ ಬಂಡೆಗಳ ಕುರುಹು ಭೂಮಿಯ ಕುಳಿಗಳಲ್ಲೂ ಕಂಡಿದ್ದವು. ಅವು ಲಕ್ಷಾಂತರ ವರ್ಷದ ಹಿಂದೆ ನದಿ ಮುಖಜ ಭೂಮಿ ಆಗಿದ್ದ ಪ್ರದೇಶವಾಗಿತ್ತು ಎಂದು ನಾಸಾದ ಖಗೋಳ ವಿಜ್ಞಾನಿ ಅಮಿ ವಿಲಯಮ್ಸ್​ ಹೇಳಿದ್ದಾರೆ.

Water hint on Planet Mars Nasa Rover sends images

ಇದನ್ನೂ ಓದಿ: ಐಎಂಪಿಎಸ್​ ಮಿತಿ 2ರಿಂದ 5 ಲಕ್ಷ ರೂ.ಗೆ ಏರಿಕೆ, ರೆಪೊ ಬದಲಿಸದಿರಲು ಆರ್​ಬಿಐ ನಿರ್ಧಾರ
ಇದನ್ನೂ ಓದಿ: Opinion: ವಯಸ್ಸಾದ ಮಾತ್ರಕ್ಕೆ ಭಾರ ಎನಿಸಬೇಕೆ? ಹಿರಿಯ ನಾಗರಿಕರ ನೆಮ್ಮದಿಗೆ ಕಿರಿಯರು ಏನು ಮಾಡಬಹುದು?