ನವದೆಹಲಿ: ವಿವಾದಕ್ಕೆ ಕಾರಣವಾಗಿದ್ದ ಮೂರು ಕೃಷಿ ಮಸೂದೆಯನ್ನು ವಾಪಸು ಪಡೆದಿರುವ ಸರ್ಕಾರ, ರೈತರ ಇನ್ನಿತರ ಬೇಡಿಕೆಗಳ ಬಗ್ಗೆ ಲಿಖಿತವಾಗಿ ಭರವಸೆ ನೀಡಿದೆ. ಇದನ್ನು ರೈತರು ಕೂಡ ಒಪ್ಪಿರುವ ಹಿನ್ನೆಲೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ದೆಹಲಿ ಮೂರು ಪ್ರಮುಖ ಗಡಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಿರುವುದಾಗಿ ಈ ನಿರಶನದ ನೇತೃತ್ವ ವಹಿಸಿದ್ದ 40ಕ್ಕೂ ಹೆಚ್ಚು ರೈತರ ಸಂಘಟನೆಗಳ  ವೇದಿಕೆಯಾದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಗುರುವಾರ ಘೋಷಿಸಿದೆ. ಇದರ ಬೆನ್ನಿಗೆ ರೈತರು ತಮ್ಮ ಮನೆಗಳತ್ತ ತಂಡೋಪತಂಡವಾಗಿ ಸಾಗುತ್ತಿದ್ದಾರೆ. ದೆಹಲಿ ಹರಿಯಾಣದ ಗಡಿಯಾದ ಸಿಂಘು, ಟಿಕ್ರಿ ಮತ್ತು ದೆಹಲಿ ಉತ್ತರ ಪ್ರದೇಶದ ಗಡಿಯಾದ ಗಾಜಿಪುರ್‌ನಲ್ಲಿ ರೈತರು ಶನಿವಾರ ವಿಜಯೋತ್ಸವದ ಮೆರವಣಿಗೆ ಮೂಲಕ ನಿರ್ಗಮಿಸಲಿದ್ದಾರೆ. ಇತ್ತ ರೈತರನ್ನು ದೆಹಲಿಗೆ ನುಗ್ಗದಂತೆ ತಡೆಯಲು ಪೊಲೀಸರು ಹಾಕಿದ್ದ ಬಾರಿ ಬಂದೋಬಸ್ತ್‌ನ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.

ಈ ಗಡಿಗಳಲ್ಲಿ ತಾತ್ಕಾಲಿಕವಾಗಿ ನಿಮರ್ಮಿಸಿದ್ದ ಶೆಲ್ಟರ್‌ಗಳನ್ನು ರೈತರು ತೆಗೆಯುತ್ತಿದ್ದಾರೆ. ಈ ಶೆಲ್ಟರ್‌ಗಳೇ ರೈತರಿಗೆ ಮಳೆ, ಚಳಿ, ಬಿಸಿಲಿನಿಂದ ರಕ್ಷಣೆ ನಡೆದಿದ್ದವು.

ಊರುಗಳಿಗೆ ಟ್ರ್ಯಾಕ್ಟರ್‌ಗಳಲ್ಲಿ ಹಿಂದಿರುಗುತ್ತಿರುವ ರೈತರನ್ನು ಹೂಮಳೆ ಗರೆದು ಸ್ವಾಗತಿಸಲು ಕೆಲವು ಗ್ರಾಮಗಳಲ್ಲಿ ಸಿದ್ಧತೆಗಳು ನಡೆದಿವೆ.

ವಿಜಯೋತ್ಸವದ ಮೆರವಣಿಗೆಯನ್ನು ಶುಕ್ರವಾರವೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್‌ ದುರಂತ ಸಂಭವಿಸಿ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಸೇರಿ 13 ಜನರು ಮರಣಿಸಿದ ಮತ್ತು ಅವರ ಅಂತ್ಯಕ್ರಿಯೆ ಶುಕ್ರವಾರ ದೆಹಲಿ ನಡೆದ ಕಾರಣ ಒಂದು ದಿನ ಮುಂದೂಡಲಾಯಿತು.

ರೈತರ ದೊಡ್ಡ ಗುಂಪು ಗುರುವಾರದಿಂದಲೇ ಮನೆಗಳತ್ತ ಹೊರಟಿದೆ. ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ ನಂತರ ನಾವು ಇಲ್ಲಿಂದ ಹೊರಡುತ್ತೇವೆ. ಗಡಿಯಿಂದ ರೈತರು ಪೂರ್ಣವಾಗಿ ಹಿಂದಿರುಗಲು ನಾಲ್ಕೈದು ದಿನವಾದರು ಹಿಡಿಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯಿತ್‌ ಹೇಳಿದ್ದಾರೆ.

Farmers Start Heading Home

ಇದನ್ನು ಓದಿ: ಹಕ್ಕುಗಳಿಗಾಗಿ ಹೋರಾಡಿ ಗೆಲುವು ಸಾಧಿಸಿದ ರೈತರಿಗೆ ಅಭಿನಂದನೆಗಳು

ಇದನ್ನೂ ಓದಿ: End of farmers’ struggle: ರೈತರ ಹೋರಾಟ ಅಂತ್ಯ: ಪ್ರಜಾಪ್ರಭುತ್ವದ ವಿಜಯ ಎಂದು ಬಣ್ಣಿಸಿದ ಹರ್ಸಿಮ್ರತ್ ಬಾದಲ್