ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ರಾಜ್ಯ ಸರ್ಕಾರ ಮತ್ತು ಶಾಸನಸಭೆಯುಳ್ಳ ಕೇಂದ್ರಾಡಳಿತ ಪ್ರದೇಶಗಳಿಗೆ ನಷ್ಟವಾಗುವ ತೆರಿಗೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಪಾವತಿಸುವ ನಷ್ಟ ಪರಿಹಾರದ ಬಾಬ್ತಿನಲ್ಲಿ 40 ಸಾವಿರ ಕೋಟಿ ರೂಪಾಯಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಇದು ದ್ವೈಮಾಸಿಕವಾಗಿ ನೀಡುವ ಸಾಮಾನ್ಯ ಜಿಎಸ್‌ಟಿ ಪರಿಹಾರಕ್ಕೆ ಹೆಚ್ಚುವರಿಯಾದಗಿದೆ. ಮೇಲಿಂದ ಮೇಲೆ (ಬ್ಯಾಕ್‌ ಟು ಬ್ಯಾಕ್‌) ಸಾಲದ ಮೂಲಕ ಒದಗಿಸುವ ಪರಿಹಾರವಾಗಿದ್ದು,  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಇನ್ನಿತರ ಮೂಲಸೌಕರ್ಯಗಳ ಯೋಜನೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

2020-21ನೇ ಸಾಲಿನಲ್ಲಿ ಕೊರೊನಾ ಕಾರಣ ಜಿಎಸ್‌ಟಿ ಸಂಗ್ರಹದಲ್ಲಿ ಆದ ಆಗಾಧ ಕೊರತೆಯಿಂದ ಜಿಎಸ್‌ಟಿ ಪರಿಹಾರ ನೀಡಲು ಆಗದ ಕಾರಣ ಆರ್‌ಬಿಐನಿಂದ 1.10 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳಿಗೆ ನೀಡುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಬಂದಿತ್ತು. ಈಗ ನೀಡಿರುವ ಪರಿಹಾರವು ಇದೇ ರೀತಿಯದ್ದಾಗಿದೆ ಎಂದು ಸಚಿವಾಲಯ ಸ್ಪಷ್ಟ ಪಡಿಸಿದೆ.

ಕಳೆದ ಜುಲೈ 15ರಂದು 75 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿತ್ತು. ಈಗ 40 ಸಾವಿರ ಕೋಟಿ ರೂಪಾಯಿಯನ್ನು ಒದಗಿಸಿದೆ. ಈ ಮೂಲಕ 2021-22ನೇ ಸಾಲಿನಲ್ಲಿ ಇದುವರೆಗೆ 1.15 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಿದಂತೆ ಆಗಿದೆ. ಇದು ಒಟ್ಟಾರೆ ಪರಿಹಾರದಲ್ಲಿ ಶೇ. 72ರಷ್ಟಾಗಿದ್ದು, ಬಾಕಿ ಮೊತ್ತವು ನಿಗದಿತ ಕಾಲದಲ್ಲಿ ಬಿಡುಗಡೆ ಆಗಲದೆ ಎಂದು ಸಚಿವಾಲಯ ತಿಳಿಸಿದೆ.

2021-22ನೇ ಸಾಲಿನಲ್ಲಿ 1.59 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲು ಮೇ 28ರಂದು ನಡೆದ 45ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಈಗ ಬಿಡುಗಡೆಯಾಗಿರುವ 40 ಸಾವಿರ ಕೋಟಿ ರೂಪಾಯಿಯು ಕೇಂದ್ರ ಸರ್ಕಾರದ ಐದು ವರ್ಷದ ಖಾತ್ರಿಯೊಂದಿಗೆ 23,500 ಕೋಟಿ ರೂಪಾಯಿ ಸಾಲವಾಗಿದ್ದು ಮತ್ತು ಪ್ರಸಕ್ತ ಆರ್ಥಿಕ ಸಾಲಿನ ಭಾಗವದ 16,500 ಕೋಟಿ ರೂಪಾಯಿಯ ಬಾಬ್ತಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ಹೆಚ್ಚುವರಿ ಸಾಲವನ್ನು ಎತ್ತುವಳಿ ಮಾಡಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

GST Compensation Shortfall Released

ಇದನ್ನು ಓದಿ: ಚಿನ್ನ-ಬೆಳ್ಳಿ ದರ ತುಸು ಏರಿಕೆ: ಇಲ್ಲಿದೆ ಪ್ರಮುಖ ನಗರಗಳ ಬೆಲೆ ವಿವರ

ಇದನ್ನು ಓದಿ: ಕೌಶಲ್ಯಭಿವೃದ್ಧಿ ಮೂಲಕ ಉದ್ಯೋಗವಕಾಶ ಸೃಷ್ಟಿಗೆ ಸರ್ಕಾರ ಗಮನಹರಿಸಲಿ