‘‘ರೈತ ದೇಶದ ಬೆನ್ನೆಲುಬು’’ ಎಂಬ ಮಾತಿದೆ. ಇದು ಶತ ಪ್ರತಿಶತ ನಿಜ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಹಸಿವಿಲ್ಲದೆ, ನಿಶ್ಚಿಂತೆಯಿಂದ ಬದುಕುತ್ತಿದ್ದರೆ ಅದರ ಹಿಂದೆ ರೈತನ ಹಗಲಿರುಳಿನ ಕಠಿಣ ಪರಿಶ್ರಮವಿದೆ. ಇದಕ್ಕೇ ಇರಬೇಕು ಹಿರಿಯರು ‘‘ತುತ್ತು ಅನ್ನ ಉಣ್ಣುವ ಮೊದಲು ರೈತನನ್ನು ನೆನೆ’’ ಎಂದದ್ದು.

ರೈತ ಎಂದರೆ ಇಂದಿಗೂ ಅದೆಷ್ಟೋ ಮಂದಿಗೆ ತಾತ್ಸಾರ. ಆದರೆ ಆತನಿಲ್ಲದಿದ್ದರೆ ನಾವಿಲ್ಲ ಎಂಬ ಸತ್ಯ ಗೊತ್ತಿಲ್ಲ! ನಮಗೆಲ್ಲಾ ಡಾಕ್ಟರ್, ಎಂಜಿನಿಯರ್, ಸೈಂಟಿಸ್ಟ್‌, ಲಾಯರ್ ಇವರೇ ಮುಖ್ಯ ಎನಿಸುತ್ತಾರೆ. ಆದರೆ ಇವರೆಲ್ಲರಿಗೂ ಹೊತ್ತಿನ ಊಟಕ್ಕೆ ಅಕ್ಕಿ ಬರುವುದು ಬಡ ರೈತನ ಭೂಮಿಯಿಂದಲೇ. ಇಷ್ಟೆಲ್ಲಾ ಗೊತ್ತಿದ್ದರೂ ತಾನೊಬ್ಬ ರೈತ ಅಥವಾ ರೈತನ ಮನೆಯವ ಎನ್ನಲು ಮುಜುಗರ.

ರೈತರ ದಿನದ ಹಿನ್ನೆಲೆ ಏನು?

‘ಕಿಸಾನ್ ದಿವಸ್’ ಎಂದೇ ಖ್ಯಾತಿ ಪಡೆದ ರೈತರ ದಿನ ಪ್ರತಿ ವರ್ಷ ಡಿಸೆಂಬರ್ 23ರಂದು ಆಚರಿಸಲಾಗುತ್ತದೆ. ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

ಚೌಧರಿ ಚರಣ್ ಸಿಂಗ್ ಯಾರು?

ಚೌಧರಿ ಚರಣ್ ಸಿಂಗ್ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು, ಭಾರತದ ಗೌರವಾನ್ವಿತ ಪ್ರಧಾನಿಯಾಗಿದ್ದರು. ಆದರೂ ಸಹ ಅವರು ಅತ್ಯಂತ ಸರಳ ಜೀವನವನ್ನು ನಡೆಸಿದರು. ಅವರ ಅಧಿಕಾರಾವಧಿಯಲ್ಲಿ ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಹಾಗೂ ಪರಿಹಾರಗಳನ್ನು ಪರಿಚಯಿಸಿದರು. ‘ಜೈ ಜವಾನ್‌ ಜೈ ಕಿಸಾನ್‌’ ಎಂಬ ಪ್ರಸಿದ್ಧ ಘೋಷಣೆಯನ್ನು ಅವರು ಅನುಸರಿಸಿದರು. ಇವರು ಯಶಸ್ವಿ ಬರಹಗಾರರಾಗಿದ್ದರು. ರೈತರು ಮತ್ತು ಅವರ ಸಮಸ್ಯೆಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದರು. ಇಂದು ಇವರ ಜನ್ಮದಿನವೂ ಹೌದು.

ಭಾರತವು ಪ್ರಮುಖವಾಗಿ ಹಳ್ಳಿಗಳ ಭೂಮಿಯಾಗಿದೆ ಹಾಗೂ ಬಹುಪಾಲು ಜನರ ಕುಲ ಕಸುಬು ಕೃಷಿಯೇ ಆಗಿದೆ. ಸ್ವಂತ ಹೊಟ್ಟೆಪಾಡಿಗಾಗಿ ಹಾಗೂ ಜನರ ಹೊಟ್ಟೆ ತುಂಬಿಸುವ ಸಲುವಾಗಿ ರೈತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂಥ ರೈತರ ಕೆಲಸವನ್ನು ಗೌರವಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ರೈತರ ಇಂದಿನ ಸ್ಥಿತಿ ಏನು?

ರೈತ ಇಂದು ಬೆಳೆನಾಶ, ಮಳೆಯ ಕೊರತೆ, ಸಾಲ ಬಾಧೆ, ದಿನೇ ದಿನೇ ಕುಸಿಯುತ್ತಿರುವ ಬೆಲೆ, ಕಾರ್ಮಿಕರ ಕೊರತೆ ಮುಂತಾದ ಹಲವಾರು ಸಮಸ್ಯೆಗಳಿಗೆ ಬಳಲಿದ್ದಾನೆ. ಇನ್ನೊಂದೆಡೆ ಕಳೆದ ಎರಡು ವರ್ಷಗಳಿಂದ ಆವರಿಸಿದ ಕೊರೊನಾ ಮಹಾಮಾರಿ ಮತ್ತಷ್ಟು ಅಪಾಯ ತಂದೊಡ್ಡಿದೆ.

ಆದರೆ ಈ ಕೊರೊನಾ ಎಲ್ಲರಿಗೂ ಕೃಷಿ ಹಾಗೂ ರೈತನ ಮಹತ್ವವನ್ನು ಬಹಳ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದೆ. ಅಮೆರಿಕ, ದುಬೈ, ಲಂಡನ್ ಎಂದು ಕೆಲಸ ಅರಸಿ ಹೋದವರು ಕೊರೊನಾ ಸಮಯದಲ್ಲಿ ಮತ್ತೆ ಮನೆಗೆ ಬಂದು ಕೃಷಿ ಮಾಡುವಂತೆ ಪ್ರೇರೇಪಿಸಿದೆ.

ಇನ್ನು ಮುಂದಾದರು, ನಾವು ರೈತನ ಬಗ್ಗೆ ತಾತ್ಸಾರ ತೋರುವ ಬದಲು ಅವರಿಗೆ ಪ್ರೋತ್ಸಾಹ ನೀಡಬೇಕು. ಸರಕಾರವೂ ರೈತರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ನಮ್ಮ ದೇಶದ ಬೆನ್ನೆಲುಬು ಕ್ಷೀಣಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

– ತೇಜಸ್ವಿನಿ ಭಾರಧ್ವಾಜ್‌ ಆರ್.ಕೆ.

Kissan Day: A Salute to Farmer

ಇದನ್ನೂ ಓದಿ: Sale of agricultural land: ಕೃಷಿ ಭೂಮಿ ಮಾರಾಟ ಮಾಡಬೇಕು ಎಂದುಕೊಂಡವರಿಗೆ ಸರ್ಕಾರದ ಶಾಕ್!