ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ, ಕನ್ನಡರಾಜ್ಯ ರಮಾರಮಣ, ಮೂರು ರಾಯರ ಗಂಡ, ಸಮರಾಂಗಣ ಸಾರ್ವಭೌಮ ಎಂದೆಲ್ಲಾ ಬಿರುದಾಂಕಿತನಾಗಿದ್ದ ಕೃಷ್ಣದೇವರಾಯನ ಆಳ್ವಿಕೆಯ ಸಮಯವು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿರುವ ಕನ್ನಡಿಗರು ಹೆಮ್ಮಪಡುವ ಇತಿಹಾಸದ ಕಾಲಘಟ್ಟವಾಗಿದೆ. ಕುಶಲ ಆಡಳಿತಗಾರನೂ, ರಾಷ್ಟ್ರರಕ್ಷಣೆಯ ವಿಷಯಕ್ಕೆ ಬಂದರೆ ವೈರಿಗಳಿಗೆ ಅರಿಭಯಂಕರನೂ ಆಗಿದ್ದ ಕೃಷ್ಣದೇವರಾಯನಿಗೆ ಕವಿಸಾರ್ವಭೌಮ, ಕವಿಯತೀಂದ್ರ, ಹಾಗೂ ರೈತರಾಯ ಎಂಬ ಇತರ ಬಿರುದುಗಳೂ ಇದ್ದವೆಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲಿದ ವಿಚಾರ.

ಕಲೆ-ಸಾಹಿತ್ಯ-ಸಂಗೀತಗಳಿಗೆ ಆಶ್ರಯದಾತನಾಗಿದ್ದ ಕೃಷ್ಣದೇವರಾಯನ ಆಸ್ಥಾನ ಉದ್ದಾಮ ಪಂಡಿತರಿಂದ, ಶ್ರೇಷ್ಠ ಸಾಹಿತಿಗಳಿಂದ, ನಟನೆಯಲ್ಲಿ ಹಾಗೂ ನೃತ್ಯಗಳಲ್ಲಿ ಪಾರಂಗತರಾದ ಕಲಾವಿದರಿಂದ ತುಂಬಿತ್ತು ಎನ್ನುವುದನ್ನು ನಾವೆಲ್ಲಾ ತಿಳಿದಿದ್ದೇವೆ. ಹೀಗಾಗಿ, ಕೃಷ್ಣದೇವರಾಯ ಎಲ್ಲ ರಂಗಗಳ ಪ್ರಾಮುಖ್ಯತೆಯನ್ನು ಅರಿತಿದ್ದ ಕುಶಲ ಆಡಳಿತಗಾರ ಮಾತ್ರವಲ್ಲದೇ ತಾನೇ ಸ್ವತ: ಉತ್ತಮ ಸಾಹಿತಿಯೂ ಆಗಿದ್ದು ಆಮುಕ್ತಮಾಲ್ಯದ ಎಂಬ ಗ್ರಂಥವನ್ನೂ ಬರೆದಿದ್ದ.

ಇಷ್ಟು ಮಾತ್ರವಲ್ಲದೇ, ಈಗಾಗಲೇ ತಿಳಿಸಿರುವಂತೆ “ರೈತರಾಯ” ಎಂದೂ ಬಿರುದಾಂಕಿತನಾಗಿದ್ದ ಅವನು ಕೃಷಿಗೆ ನೀಡುತ್ತಿದ್ದ ಪ್ರಾಮುಖ್ಯತೆಯಿಂದಾಗಿ ಈ ಬಿರುದನ್ನು ಪಡೆದಿದ್ದ. ಸಾಮ್ರಾಜ್ಯದ ರಕ್ಷಣೆಗೆ ಕೊಡುತ್ತಿದ್ದ ಪ್ರಾಮುಖ್ಯತೆಯನ್ನೇ ಕೃಷಿಗೂ ನೀಡುತ್ತಿದ್ದನೆಂಬುದು ಅವನ ಆಮುಕ್ತಮಾಲ್ಯದಲ್ಲಿನ ಪದ್ಯವೊಂದರಿಂದ ವೇದ್ಯವಾಗುತ್ತದೆ. ಅದು ಹೀಗಿದೆ “ಅರಸರ ಪಾದದ ನೇಗಿಲ ರೇಖೆಗಳಿಗಿಂತ ನಮ್ಮ ಭುಜಾಗ್ರದ ನೇಗಿಲ ರೇಖೆಗಳೆ ಮೇಲೆನುತ ಕೋಟಿ ಗಿರಿಗಳ ಧಾನ್ಯ ರಾಶಿಗಳ ಬೆಳೆವ ಇಲ್ಲಿನ ಸುಜನ ಸೇವೆಯೊಂದೆ ಕೀರ್ತಿ ಶೂದ್ರಜಾತಿ.” ರಾಜರ ಪಾದಗಳಲ್ಲಿನ ನೇಗಿಲ ರೇಖೆಗಳಿಗಿಂತ ರೈತನು ತನ್ನ ಭುಜಗಳ ಮೇಲೆ ಹೊತ್ತ ನೇಗಿಲಿನ ಬೆಲೆಯೇ ಹೆಚ್ಚು,ಏಕೆಂದರೆ ರೈತನು ಧಾನ್ಯ ಬೆಳೆದು ಬೆಟ್ಟಗಳಂಥ ರಾಶಿಯನ್ನು ಹಾಕಿ ಸಮಾಜದ ಎಲ್ಲ ವರ್ಗಗಳ ಜೀವಾಧಾರವಾಗಿದ್ದಾರೆ. ಸಮಾಜದ ಹಸಿವನ್ನು ನೀಗುವ ಕಾಯಕ ಮಾಡುವ ರೈತ (ಶೂದ್ರ) ಸಮುದಾಯದ ಪಾರಮ್ಯವನ್ನು ಚಕ್ರವರ್ತಿಯೇ ಹೀಗೆ ಹೇಳಿರುವ ಉದಾಹರಣೆ ಅತಿ ವಿರಳ.

ಅವನು ಕೃಷಿಕರಿಗೆ ನೀಡಿದ ಪ್ರೋತ್ಸಾಹ ಹಾಗೂ ಗೌರವಾದರಗಳಿಂದಲೇ ಅವನ ರಾಜ್ಯವು ಸುಭಿಕ್ಷವಾಗಿತ್ತೆನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಈಗಿನ ಎಲ್ಲಾ ಆಡಳಿತಗಾರರಿಗೂ ಮಾದರಿಯಾಗಬೇಕಿದೆ.

(ಕೃಪೆ: ಆರಂಬ ತ್ರೈಮಾಸಿಕ)

Krishna Devaraya knew the importance of agricultrure and farmers in addition to being an able administrator

ಇದನ್ನೂ ಓದಿ: Music Dance Festival: ಪ್ರಾಚೀನ ಕಲೆಗಳು ಸಂಸ್ಕೃತಿಯ ಬೇರು 

ಇದನ್ನೂ ಓದಿ: Grand Title: ಶೃಂಗೇರಿಯ ಬಾಲಪ್ರತಿಭೆಗೆ ಗ್ರ್ಯಾಂಡ್ ಟೈಟಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ