ಹೈದರಾಬಾದ್: ಅಸ್ಸಾಂ ಮುಖ್ಯಮಂತ್ರಿ (Assam Chief Minister) ಹಿಮಾಂತ ಬಿಸ್ವಾ ಶರ್ಮಾ (Himanta Biswa Sarma) ಅವರ ರ‍್ಯಾಲಿ ವೇಳೆ ವ್ಯಕ್ತಿಯೊಬ್ಬ, ಏಕಾಏಕಿ ವೇದಿಕೆ ಮೇಲೇರಿ ಮೈಕ್‍ನ್ನು ಸ್ಟ್ಯಾಂಡ್ ನಿಂದ ಎಳೆದಾಡಿದ ಘಟನೆ ನಗರದಲ್ಲಿ ನಡೆದಿದೆ.

ಹಿಮಾಂತ ಬಿಸ್ವಾ ಶರ್ಮಾ ಗಣೇಶ ಹಬ್ಬ ಮತ್ತು ಇತರ ಕಾರ್ಯಕ್ರಮಗಳಿಗೆ ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಅತಿಥಿಯಾಗಿ ಹೈದರಾಬಾದ್‍ನಲ್ಲಿದ್ದಾರೆ (Hyderabad). ಮುಂಜಾನೆ ನಗರದ ಪ್ರಮುಖ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಹಿಮಾಂತ ಬಿಸ್ವಾ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ (KCR) ವಿರುದ್ಧ ವಾಗ್ದಾಳಿ ನಡೆಸಿದರು.

ಬಳಿಕ ರ‍್ಯಾಲಿ ವೇಳೆ ವೇದಿಕೆ ಮೇಲೆ ಬಂದ ಕೆಸಿಆರ್ ಪಕ್ಷದ ಬಣ್ಣ ಹೊಂದಿರುವ ಶಾಲು ಧರಿಸಿದ್ದ ವ್ಯಕ್ತಿ ಏಕಾಏಕಿ ಮೈಕ್ ಎಳೆದಾಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಹಿಮಾಂತ ಬಿಸ್ವಾ ಶರ್ಮಾ ಗಾಬರಿಗೊಂಡಂತೆ ಕಂಡು ಬಂತು. ಬಳಿಕ ಕೂಡಲೇ ವೇದಿಕೆ ಮೇಲಿದ್ದವರು ಅಪರಿಚಿತ ವ್ಯಕ್ತಿಯನ್ನು ವೇದಿಕೆಯಿಂದ ಕೆಳಗಿಳಿಸಿದರು.

ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ಬಳಿಕ ರ‍್ಯಾಲಿಯಲ್ಲಿ ಮಾತನಾಡಿದ ಹಿಮಾಂತ ಬಿಸ್ವಾ, ಮುಖ್ಯಮಂತ್ರಿ ಕೆಸಿಆರ್ ಅವರು ಬಿಜೆಪಿ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ರಾಜವಂಶ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತೇವೆ.

ಹೈದರಾಬಾದ್‍ನಲ್ಲಿ ಅವರ ಮಗ ಮತ್ತು ಮಗಳ ಚಿತ್ರಗಳನ್ನು ನೋಡುತ್ತೇವೆ. ದೇಶದ ರಾಜಕೀಯವು ರಾಜವಂಶದ ರಾಜಕೀಯದಿಂದ ಮುಕ್ತವಾಗಿರಬೇಕು. ಸರ್ಕಾರವು ದೇಶಕ್ಕಾಗಿ, ಜನರಿಗಾಗಿ ಇರಬೇಕು. ಇದನ್ನು ಹೊರತು ಪಡಿಸಿ ಒಂದು ಕುಟುಂಬಕ್ಕಾಗಿ ಇರಬಾರದು ಎಂದು ವಾಗ್ದಾಳಿ ನಡೆಸಿದರು.