• ವಿಧಾನಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟ
  • ಕೈಗಾರಿಕಾ ಬೆಳವಣಿಗೆ ಸರ್ಕಾರ ಉತ್ತೇಜನ.
  • ಯಾದಗಿರಿಯಲ್ಲ್ಲಿ ಔಷಧಿ ಕಾರ್ಖಾನೆ ಪ್ರಾರಂಭ

ಬೆಂಗಳೂರು: ರಾಜ್ಯದಲ್ಲಿ 2022 ರ ನವೆಂಬರ್ ತಿಂಗಳ 2 ರಿಂದ 4 ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುವುದು ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ *ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸದುದ್ದೇಶದಿಂದ ೨೦೨೨ರ ನವೆಂಬರ್ ೨ರಿಂದ ೩ ದಿನಗಳ ಕಾಲ  ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಮತ್ತೊಮ್ಮೆ ಸಿಎಂ ಜೊತೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸುವುದಾಗಿ ಹೇಳಿದರು.

ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ದೇಶ-ವಿದೇಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಅಲ್ಲದೆ ಉದ್ಯೋಗ ಕ್ರಾಂತಿಯಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ತಿಳಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಔಷಧಿ ಕಾರ್ಖಾನೆಯನ್ನು ತೆರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಕೇಂದ್ರ ₹೧೦೦೦ ಕೋಟಿ ಅನುದಾನವನ್ನು ನೀಡುತ್ತದೆ. ಇದಕ್ಕಾಗಿ ಮೂರು ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕವೂ ಸಹ ಆರ್ಥಿಕ ನೆರವು ಪಡೆಯಲಿದೆ. ಅಲ್ಲದೆ ಹೆಚ್ಚಿನ  ಉದ್ಯೋಗ ಅವಕಾಶಗಳು ಸಿಗಲಿದೆ ಎಂದರು.

ಈ ಹಿಂದೆ ಲ್ಯಾಂಡ್ ಬ್ಯಾಂಕ್ ಇಲ್ಲದ ಕಾರಣ ೨೦೧೦ರಲ್ಲಿ ನ್ಯಾನೋ ಕಂಪನಿ ರಾಜ್ಯಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಕಂಪನಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದರು. ಸಕಾಲಕ್ಕೆ ಸರಿಯಾಗಿ ಭೂಮಿ ಸಿಗದ ಕಾರಣ ಕಂಪನಿಯು ಗುಜರಾತಿಗೆ ತೆರಳಬೇಕಾಯಿತು.  ಹೀಗಾಗಿಯೇ ರಾಜ್ಯದಲ್ಲಿ ಲ್ಯಾಂಡ್ ಬ್ಯಾಂಕ್ ಪರಿಕಲ್ಪನೆಯನ್ನು ಜಾರಿಗೆ ತಂದೆವು. ಪರಿಣಾಮ ಅನೇಕ ಕೈಗಾರಿಕೆಗಳು ಜಾರಿಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆ ಕಡೆಚೂರು ಮತ್ತು ಬಾಡಿಯಾಳ ಗ್ರಾಮದಲ್ಲಿ ೩೨೩೨2 ಹಾಗೂ ೩೨೮೨ ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಯಿತು. ಇದರಲ್ಲಿ ೧೬೦೦ ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್ ತುಮಕೂರು, ಬೆಂಗಳೂರು, ಮುಂಬೈ, ಆರ್ಥಿಕ ಕಾರಿಡಾರ್, ಹೈದರಾಬಾದ್-ಬೆಂಗಳೂರು ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕೈಗಾರಿಕೆಯಲ್ಲಿ ಬದಲಾವಣೆಯಾಗಲಿದೆ  ಎಂದು ತಿಳಿಸಿದರು.

ಶಾಸಕ ಈಶ್ವರ್ ಖಂಡ್ರೆ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ ಅವರು ಕೈಗಾರಿಕಾ ಪ್ರದೇಶಾಭಿವೃದ್ಧಿ ವತಿಯಿಂದ ಬೀದರ್ ಜಿಲ್ಲೆಯಲ್ಲಿ ೧೦೯೬.೫೫ ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ ೧೪೩೨.೩೩ ಎಕರೆ  ಜಮೀನನ್ನು ೧೩೯೨ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.  ೧೧೫೦ ಎಕರೆ ಜಮೀನನ್ನು ನಾಲ್ಕು ಯೋಜನೆಗಳಿಗೆ  ಕಾಯ್ದಿರಿಸಲಾಗಿದೆ ಎಂದರು.

ರಾಜ್ಯದಲ್ಲಿ ಕೈಗಾರಿಕಾ ಬಳಕೆಗೆ 0.೪೮ ಜಮೀನು ಬಳಸಿಕೊಳ್ಳುತ್ತಿದ್ದೇವೆ. ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕಿದೆ. ಲ್ಯಾಂಡ್ ಮೂಲಕ ನಾವು ಕೈಗಾರಿಕಾ ಬೆಳವಣಿಗೆಗಳಿಗೆ ಉತ್ತೇಜನ ನೀಡುತ್ತಿರುವುದಾಗಿ ತಿಳಿಸಿದರು