ಬೆಂಗಳೂರು: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಶಿವಮೊಗ್ಗ ಸೇರಿ ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ಕೆಲಕಾಲ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಆಟೋ ಮೇಲೆ ಮರ ಬಿದ್ದು ದಂಪತಿ ಸೇರಿ ನಾಲ್ವರು ಬಲಿಯಾಗಿದ್ದಾರೆ. ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ಹುಬ್ಬಳ್ಳಿ, ವಿಜಯನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಗಾಳಿಸಹಿತ ಉತ್ತಮ ಮಳೆಯಾಗಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಧು (34) ಎಂಬುವರು ತಮ್ಮ ಪತ್ನಿಯನ್ನು ತವರು ಮನೆಗೆ ಬಿಟ್ಟು ಹಿಂದಿರುಗುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಬಿರುಗಾಳಿ ಸಹಿತ ಮಳೆಯ ಜತೆಗೆ ಕಾಣಿಸಿಕೊಂಡ ಸಿಡಿಲಿನ ಆರ್ಭಟಕ್ಕೆ ಬೆದರಿದ ಮದ್ದೂರು ಪಟ್ಟಣದ ಶಿವಪುರ ನಿವಾಸಿ ಗೌರಮ್ಮ (60) ಎಂಬುವವರು ಮನೆಯಲ್ಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಏಕಾಏಕಿ ಆರಂಭವಾದ ಗಾಳಿ, ಮಳೆಗೆ ಕಾಪು ತಾಲೂಕಿನ ಮಜೂರು ಮಸೀದಿ ಬಳಿ ಚಲಿಸುತ್ತಿದ್ದ ರಿಕ್ಷಾ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು, ಅದರಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುರಿದು ಬಿದ್ದ ವಿದ್ಯುತ್‌ ಕಂಬ: ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಹಾಗೂ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಹಲವು ಮನೆಗಳ ಚಾವಣಿ ಹಾರಿಹೋಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳು ಮುರಿದು ಬಿದ್ದು, ವಿದ್ಯುತ್‌ ಸಂಪರ್ಕ ವ್ಯತ್ಯಯಗೊಂಡಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ಶಿರಸಿ ತಾಲೂಕಿನ ಬನವಾಸಿಯಲ್ಲಿ ರಾಜ್ಯ ಹೆದ್ದಾರಿ 137ರಲ್ಲಿ ಗೂಡ್‌್ಸ ಆಟೋ ಮೇಲೆ ಬೃಹತ್‌ ಮರ ಬಿದ್ದು ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್‌ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೆಡುವು ಗೊಲ್ಲರಹಟ್ಟಿಯ ಕಣದಲ್ಲಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ. ಅದೇ ರೀತಿ ಚಾಮರಾಜನಗರ ಜಿಲೆಯ ಹನೂರು ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಭಾರೀ ಗಾಳಿ-ಮಳೆಗೆ 5 ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ನೆಲಕಚ್ಚಿ 18 ಲಕ್ಷ ನಷ್ಟವಾಗಿದೆ ಎನ್ನಲಾಗಿದೆ.

4 people died due to rain in more than eight districts of Karnataka