ಮೊಹಾಲಿ: ಶಾನ್ ಕಿಶನ್ ಅಬ್ಬರ, ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ, ಅಂತಿಮ ಹಂತದಲ್ಲಿ ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್  ಬೃಹತ್ ಟಾರ್ಗೆಟ್ ಚೇಸ್ ಮಾಡಿದೆ. ಪಂಜಾಬ್ ನೀಡಿದ್ದ 215 ರನ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 6 ವಿಕೆಟ್ ಗೆಲುವು ದಾಖಲಿಸಿದೆ

215 ರನ್ ಬೃಹತ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ ರನ್ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಆದರೆ ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ಕ್ಯಾಮರೂನ್ ಗ್ರೀನ್ 23 ರನ್ ಸಿಡಿಸಿ ಔಟಾದರು. ಟಾರ್ಗೆಟ್ ಬೃಹತ್ ಕಾರಣ ಮುಂಬೈ ಮೇಲೆ ಒತ್ತಡ ಹೆಚ್ಚಾಯಿತು. ಈ ವೇಳೆ ಮುಂಬೈ ತಂಡಕ್ಕೆ ಸೂರ್ಯಕುಮಾರ್ ಯಾದವ್ ನೆರವಾದರು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಾಗಿ ಅಬ್ಬರಿಸದ ಸೂರ್ಯಕುಮಾರ್ ಯಾದವ್, ಪಂಜಾಬ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ಅಬ್ಬರಕ್ಕೆ ಪಂಜಾಬ್ ಬೆಚ್ಚಿತು. ಇತ್ತ ಇಶಾನ್ ಕಿಶನ್ ಕೂಡ ಉತ್ತಮ ಸಾಥ್ ನೀಡಿದರು. ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ ತಲಾ ಅರ್ಧಶತಕ ಸಿಡಿಸಿದರು.

ಸೂರ್ಯಕುಮಾರ್ ಯಾದವ್ 31 ಎಸೆತದಲ್ಲಿ 66 ರನ್ ಸಿಡಿಸಿ ಔಟಾದರು.  ಸೂರ್ಯಕುಮಾರ್ ಯಾದವ್ ವಿಕೆಟ್ ಪತನ ಮುಂಬೈ ತಂಡದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಇಶಾನ್ ಕಿಶನ್ ಬ್ಯಾಟಿಂಗ್ ಮುಂದುವರಿಸಿದರು. ಕಿಶನ್ 41 ಎಸೆತದಲ್ಲಿ 75 ರನ್ ಸಿಡಿಸಿ ಔಟಾದರು. ಕಿಶನ್ ವಿಕೆಟ್ ಪತನವಾಗುತ್ತಿದ್ದಂತೆ ಪಂಜಾಬ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಆದರೆ ಪಂಜಾಬ್ ಲೆಕ್ಕಾಚಾರವನ್ನು ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಉಲ್ಟಾ ಮಾಡಿದರು. ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಸ್ಪೋಟಕ ಬ್ಯಾಟಿಂಗ್‌ಗೆ ಪಂಜಾಬ್ ಬಳಿ ಉತ್ತರವೇ ಇರಲಿಲ್ಲ. ತಿಲಕ್ ವರ್ಮಾ 10 ಎಸೆತದಲ್ಲಿ ಅಜೇಯ 26 ರನ್ ಸಿಡಿಸಿದರೆ, ಡೇವಿಡ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಮುಂಬೈ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.

ಪಂಜಾಬ್ ಇನ್ನಿಂಗ್ಸ್: ಪಂಜಾಬ್ ಸ್ಫೋಟಕ ಬ್ಯಾಟಿಂಗ್ ಮೂಲಕ 3 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿತ್ತು. ಪ್ರಬ್‌ಸಿಮ್ರನ್ ಸಿಂಗ್ ಹೊರತು ಪಡಿಸಿ ಇನ್ನುಳಿದ ಪಂಜಾಬ್ ಬ್ಯಾಟ್ಸ್‌ಮನ್ ಉತ್ತಮ ಕೊಡುಗೆ ನೀಡಿದರು. ನಾಯಕ ಶಿಖರ್ ಧವನ್ 30 ರನ್ ಕಾಣಿಕೆ ನೀಡಿದರು. ಇತ್ತ ಮ್ಯಾಥ್ಯೂ ಶಾರ್ಟ್ 27 ರನ್ ಸಿಡಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಅಬ್ಬರದ ಬ್ಯಾಟಿಂಗ್‌ನಿಂದ ಪಂಜಾಬ್ ಬೃಹತ್ ಮೊತ್ತ ಸಿಡಿಸಿತು. ಲಿಯಾಮ್ ಲಿವಿಂಗ್‌ಸ್ಟೋನ್ 42 ಎಸೆತದಲ್ಲಿ ಅಜೇಯ 82 ರನ್ ಸಿಡಿಸಿದರು. ಇತ್ತ ಜಿತೇಶ್ ಶರ್ಮಾ 27 ಎಸೆತದಲ್ಲಿ ಅಜೇಯ 49 ರನ್ ಸಿಡಿಸಿದರು.ಈ ಮೂಲಕ 3 ವಿಕೆಟ್ ಕಳೆದುಕೊಂಡು 213 ರನ್ ಸಿಡಿಸಿತ್ತು.

A crowning victory for Mumbai Indians