ಮುಂಬೈ: ಮುಂಬೈ ಗೆಲುವಿಗೆ ಅಂತಿಮ ಓವರ್‌ನಲ್ಲಿ 17 ರನ್ ಅವಶ್ಯಕತೆ ಇತ್ತು. ಕ್ರೀಸ್‌ನಲ್ಲಿದ್ದ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮುಂಬೈ ಇಂಡಿಯನ್ಸ್‌ಗೆ 6 ವಿಕೆಟ್ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಅಂತಿಮ ಹಂತದಲ್ಲಿನ ಹೋರಾಟ ಮುಂಬೈ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.

213 ರನ್ ಬೃಹತ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಒತ್ತಡಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮಾ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ಮುಂಬೈ ಇಂಡಿಯನ್ಸ್ 14 ರನ್ ಸಿಡಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಬೃಹತ್ ಮೊತ್ತ ಚೇಸಿಂಗ್ ಆರಂಭದಲ್ಲೇ ಹಿನ್ನಡೆಯಾಯಿತು. ಆದರೆ ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಹೋರಾಟದಿಂದ ಮುಂಬೈ ಇಂಡಿಯನ್ಸ್ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಸೂಚನೆ ನೀಡಿತು.

ಇಶಾನ್ ಕಿಶನ್ 23 ಎಸೆತದಲ್ಲಿ 28 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಗ್ರೀನ್ ಹೋರಾಟ ಮುಂದುವರಿಸಿದರು. 26 ಎಸೆತದಲ್ಲಿ 4 ಬೌಂಡರಿ 2 ಸಿಕ್ಸರ್ ಮೂಲಕ 44 ರನ್ ಸಿಡಿಸಿ ಕ್ಯಾಮರೂನ್ ಗ್ರೀನ್ ಔಟಾದರು. 101 ರನ್‌ಗೆ ಮುಂಬೈ 3ನೇ ವಿಕೆಟ್ ಕಳೆದುಕೊಂಡಿತು. ಕುಸಿದ ತಂಡಕ್ಕೆ ಸೂರ್ಯುಕಮಾರ್ ಬಿರುಸಿನ ಹೊಡೆತ ನೆರವಾಯಿತು. ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ ಸಿಡಿಸಿ ಚೇಸಿಂಗ್ ಸೂಚನೆ ನೀಡಿದರು.

ಸೂರ್ಯಕುಮಾರ್ 29 ಎಸೆತದಲ್ಲಿ 55 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ವಿಕೆಟ್ ಪತನ ಮುಂಬೈ ತಂಡಕ್ಕೆ ತೀವ್ರ ಹಿನ್ನಡೆ ಅನುಭವಿಸಿತು. ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಜೊತೆಯಾಟ ಆರಂಭಗೊಂಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಸೋಲಿನಿಂದ ತಂಡವನ್ನು ಪಾರು ಮಾಡಿದರು. ಡೇವಿಡ್ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಇನ್ನೂ 3 ಎಸೆತ ಬಾಕಿ ಇರುವಂತೆ ಮುಂಬೈ 6 ವಿಕೆಟ್‌ಗಳಿಂದ ಪಂದ್ಯ ಗೆದ್ದುಕೊಂಡಿತು.

ರಾಜಸ್ಥಾನ ರಾಯಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಗರಿಷ್ಠ ಸ್ಕೋರ್ ದಾಖಲೆ ನಿರ್ಮಿಸಿತು. ಯಶಸ್ವಿ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಜೈಸ್ವಾಲ್ 53 ಎಸೆತದಲ್ಲಿ ಸೆಂಚುರಿ ಪೂರೈಸಿದರು. 62 ಎಸೆತದ ಎದುರಿಸಿದ ಜೈಸ್ವಾಲ್ 124 ರನ್ ಸಿಡಿಸಿದರು. ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ 4ನೇ ಅತೀ ಕಿರಿಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೈಸ್ವಾಲ್ ಏಕಾಂಗಿ ಹೋರಾಟ ನೀಡಿದರು. ಇತರರಿಂದ ರನ್ ಹರಿದು ಬರಲಿಲ್ಲ. ಜೋಸ್ ಬಟ್ಲರ್ 18, ನಾಯಕ ಸಂಜು ಸ್ಯಾಮ್ಸನ್ 14, ದೇವದತ್ ಪಡಿಕ್ಕಲ್ 2 ರನ್, ಜೇಸನ್ ಹೋಲ್ಡರ್ 11, ಶಿಮ್ರೊನ್ ಹೆಟ್ಮೆಯರ್ 8 ರನ್, ಧ್ರುವ್ ಜುರೆಲ್ 2 ರನ್, ಆರ್ ಅಶ್ವಿನ್ ಅಜೇಯ 8 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 7 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿತು.

A hat-trick six in the final over is the victory for CDC Mumbai