ಚಿಕ್ಕಮಗಳೂರು: ಜಿಲ್ಲಾಡಳಿತದ ವತಿಯಿಂದ ಬಿರ್ಸಾಮುಂಡಾ ಜಯಂತಿಯನ್ನು ನವೆಂಬರ್ ೧೫ ರಂದು ಆಚರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ಬಿರ್ಸಾಮುಂಡಾ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆದಿ ಜನಾಂಗದ ಬಿರ್ಸಾಮುಂಡಾ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿದ್ದರು. ರಾಜ್ಯದಲ್ಲಿ ಆದಿವಾಸಿ ಜನರು ಹೆಚ್ಚಾಗಿ ವಾಸಿಸುವ ರಾಜ್ಯದ ೭ ಜಿಲ್ಲೆಗಳಲ್ಲಿ ಅವರು ಜನಿಸಿದ ನವೆಂಬರ್ ೧೫ ನ್ನು ಜಯಂತಿಯನ್ನಾಗಿ ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಅವರ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಕುವೆಂಪು ಕಲಾ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಿರ್ಸಾಮುಂಡಾರ ಕುರಿತು ಉಪನ್ಯಾಸ, ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ತಾಲ್ಲೂಕು ಕಛೇರಿ ಆವರಣದಿಂದ ಕುವೆಂಪು ಕಲಾ ಮಂದಿರದವರೆಗೆ ಬಿರ್ಸಾಮುಂಡಾರ ಭಾವಚಿತ್ರದೊಂದಿಗೆ ಸ್ಥಳೀಯ ಕಲಾವಿದರಿಂದ ಮೆರವಣಿಗೆ ನಡೆಯಲಿದೆ. ಆದಿವಾಸಿ ಜನಾಂಗದ ಕಲಾವಿದರ ವೇಷಭೂಷಣ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿರಲಿದೆ ಸಿಕೆಲ್ ಸೆಲ್ ಅನೀಮಿಯಾ ಕುರಿತು ಅರಿವು ಮೂಡಿಸಲಾಗುವುದಲ್ಲದೆ ಕರ ಪತ್ರ, ಭಿತ್ತಿ ಪತ್ರಗಳ ಮೂಲಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಎಂದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ನಿರ್ದೇಶನದಂತೆ ನವೆಂಬರ್ ೧೫ ರಿಂದ ೨೬ ರವರೆಗೆ ರಾಜ್ಯದ ೭ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದವರಿಗಾಗಿ ಜಾರಿಗೆ ತಂದಿರುವ ಉಜ್ವಲ್ ಯೋಜನಾ, ಮುದ್ರಾ ಸಾಲ, ಪಿಎಂಜೆಎವೈ ಜಲ ಯೋಜನಾ ಸೇರಿದಂತೆ   ವಿವಿಧ ಯೋಜನೆಗಳನ್ನು ಎಲ್ ಇ ಡಿ ವಾಹನಗಳ ಮೂಲಕ ಪ್ರಚಾರ ಮಾಡಲಾಗುವುದು. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ೪೧ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ಮಾಡಲಾಗುವುದಲ್ಲದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಲ್ಲದೆ ಆರೋಗ್ಯ ತಪಾಸಣಾ ಮಾಡಲಾಗುವುದು ಆರೋಗ್ಯ ತಪಾಸಣಾದಲ್ಲಿ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಎಲ್ಲಾ ಆಶ್ರಮ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಕ್ರೀಡೆ, ಬ್ಲಾಗ್ ಸೃಜಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ನವೆಂಬರ್ ೨೬ ಭಾರತದ ಸಂವಿಧಾನ ದಿನಾಚರಣೆಯಾಗಿರುವುದರಿಂದ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಪೀಠಿಕೆ ಓದಿಸುವುದು, ಸಂವಿಧಾನದಲ್ಲಿ ಭಾರತೀಯ ನಾಗರಿಕರಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಕುರಿತು ಹಾಗೂ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದವರಿಗೆ ನೀಡಿರುವ ವಿಶೇಷ ಹಕ್ಕುಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಸಭೆಯಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಯೋಜನಾಸಮನ್ವಯಾಧಿಕಾರಿ ಭಾಗೀರಥಿ, ಎನ್ ಐ ಸಿ ನೋಡಲ್ ಅಧಿಕಾರಿ ಕೃಷ್ಣ ಕಿರಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜನಾಯ್ಕ, ಆದಿವಾಸಿ ಜನಾಂಗದ ಜಿಲ್ಲಾ ಅಧ್ಯಕ್ಷ ಪಿ. ರಾಜೇಶ್ ಸೇರಿದಂತೆ ಆದಿವಾಸಿ ಜನಾಂಗದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
A preliminary preparatory meeting was held in connection with Birsamunda Jayanti celebrations