ಬೆಂಗಳೂರು: ಜೂನ್ ಎರಡನೇ ವಾರದಲ್ಲಿ ಮುಂಗಾರು ಮಾರುತಗಳು ಪ್ರವೇಶಿಸಿದ್ದರೂ ನಿರೀಕ್ಷಿತ ಮಳೆಯಾಗಿಲ್ಲ. ಆದರೆ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮಳೆ ಬಿರುಸಾಗಿದ್ದು, ರಾಜ್ಯದಲ್ಲಿ ಮಳೆ ಕ್ರಮೇಣ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಮುಂದಿನ 4-5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈ ತಿಂಗಳವಿಡಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಜು. ೬ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರ ತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಮುನ್ಸೂಚನೆಯಂತೆ ಭಾನುವಾರ ಸಂಜೆಯ ನಂತರ ಕರಾವಳಿಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದು ಆಶಾದಾಯಕವಾಗಿದೆ. ವೈಜ್ಞಾನಿಕ ಹವಾಮಾನ ಮುನ್ಸೂಚನೆಯ ಜೊತೆಗೆ ಜು. 6 ರಿಂದ ಪುನರ್ವಸು ಮಳೆ ಕೂಡ ಆರಂಭವಾಗಲಿದೆ. ಪರಿಣಾಮ ನಿನ್ನೆ ಸಂಜೆ ರಾಜಧಾನಿ ಬೆಂಗಳೂರಿನ ಬಹುತೇಕ ಕಡೆ ಮಳೆಯಾಗಿದ್ದು, ಇಂದು ಮಧ್ಯಾಹ್ನ ಮತ್ತು ಸಂಜೆ ಕೂಡ ಬಿರುಸಿನ ಮಳೆಯಾಗಿದೆ.

ಜೂನ್ ನಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಜುಲೈನಲ್ಲಿ ಭರದಿಂದ ಆರಂಭವಾಗುವ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಜುಲೈ 3ರಿಂದ 7ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಜುಲೈ 4 ರಿಂದ ಜುಲೈ 7 ರವರೆಗೆ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಗುಡ್ಡಗಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 5 ರಂದು ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಮೈಸೂರಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ,ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ ೪೮ ಗಂಟೆ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗ್ರಾಮೀಣ ಪ್ರದೇಶ, ತುಮಕೂರು, ಬೆಳಗಾಂ, ಕೊಡಗು, ವಿವಿಧೆಡೆ ಭಾನುವಾರ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಒಳನಾಡಿನ ಬಹುತೇಕ ಗುಡ್ಡಗಾಡು ಪ್ರದೇಶ, ಕರಾವಳಿ ಹಾಗೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

According to the Meteorological Department the rain will gradually intensify in the state