ಮಂಗಳೂರು: ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 30ಕ್ಕೂ ಹೆಚ್ಚು ಮಂದಿಗೆ ವಂಚಿಸಿ 50 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ ಆರೋಪದ ಮೇಲೆ ಮಂಗಳೂರಿನ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಿಜೈ ಮೂಲದ ಸುಧೀರ್ ರಾವ್ ವಿ ಆರ್ ಬಲ್ಗೇರಿಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವರಿಂದ 50 ಲಕ್ಷ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದನು. ಹಣ ಪಡೆದಿದ್ದ ಆತ ನಂತರ ವೀಸಾ ಕೊಡಿಸಿಲ್ಲ ಅಥವಾ ಹಣವನ್ನು ಹಿಂದಿರುಗಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಲವು ವಂಚನೆ ಪ್ರಕರಣಗಳಲ್ಲಿ ಬೇಕಾಗಿದ್ದು, ಆತ ತಲೆಮರೆಸಿಕೊಂಡಿದ್ದನು. ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಸೊಸೈಟಿಗಳಿಂದ ಕಾರು ಖರೀದಿಸಲು ಸಾಲ ಪಡೆದಿದ್ದನು. ಈತನ ವಿರುದ್ಧ ಮಂಗಳೂರು ಪೂರ್ವ, ಮಂಗಳೂರು ದಕ್ಷಿಣ, ಸುರತ್ಕಲ್ ಮತ್ತು ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಗೆ ವಂಚಿಸಿದ ಆರೋಪದ ಮೇಲೆ ಬಂಟ್ವಾಳ ಮತ್ತು ಮೂಡುಬಿದಿರೆ ಠಾಣೆಗಳಲ್ಲಿ ದೂರು ದಾಖಲಾಗಿತ್ತು.

ಆರೋಪಿಯು ಈಗಾಗಲೇ 8 ಪ್ರಕರಣಗಳನ್ನು ಎದುರಿಸುತ್ತಿದ್ದು, ಜನರಿಗಿಂತ ಹೆಚ್ಚು ವಂಚನೆ ಮಾಡಿರುವ ಸಾಧ್ಯತೆಯಿರುವುದರಿಂದ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.

Accused arrested for defrauding Rs 50 lakhs on the promise of employment