ಬೆಂಗಳೂರು: ಖ್ಯಾತ ಮೆಸೆಂಜರ್‌ ಆ್ಯಪ್‌ ವಾಟ್ಸಪ್‌ ತನ್ನ ನತನ ಫೀಚರ್ ಗಳನ್ನು ಪರಿಚಯಿಸುತ್ತಿದ್ದು, ‘ಕಮ್ಯುನಿಟಿ’ ಎಂಬ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದೆ.

ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು (ವಾಟ್ಸ್‌ಆ್ಯಪ್‌ ಗ್ರೂಪ್‌)ಗಳನ್ನು ರಚಿಸಲು ಅನುವು ಮಾಡಿಕೊಡುತ್ತಿದ್ದು, ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ, ಇನ್‌–ಚಾಟ್‌ ಪೋಲ್‌ (ಅಭಿಪ್ರಾಯ ಸಂಗ್ರಹ)ದಂಥ ವಿಶೇಷತೆಗಳನ್ನೂ ವಾಟ್ಸ್‌ಆ್ಯಪ್‌ ನೀಡುತ್ತಿದೆ. ವಾಟ್ಸ್‌ಆ್ಯಪ್‌ನ ಮಾಲೀಕ ಸಂಸ್ಥೆ ಮೆಟಾ ಈ ಬಗ್ಗೆ ಗುರುವಾರ ಅಧಿಕೃತ ಮಾಹಿತಿ ನೀಡಿದೆ. ವಿವಿಧ ಚಾಟ್ ಗುಂಪುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ‘ವಾಟ್ಸ್‌ಆ್ಯಪ್‌ ಕಮ್ಯುನಿಟಿ’ಯ ವಿಶೇಷತೆಯಾಗಿದೆ. ಇದರ ಮೂಲಕ ಸಾವಿರಾರು ಮಂದಿಗೆ ಒಂದೇ ಬಾರಿಗೆ ಸಂದೇಶ ರವಾನಿಸಬಹುದು. ಈ ವೈಶಿಷ್ಟ್ಯವು ಕೆಲಸದ ಸ್ಥಳಗಳು ಅಥವಾ ಶಾಲೆಗಳಲ್ಲಿ ಸಮರ್ಥವಾಗಿ ಬಳಕೆ ಬರಲಿದೆ ಎಂದು ಹೇಳಲಾಗಿದೆ.

ಇನ್ನುಮುಂದೆ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ 1,024 ಮಂದಿಯನ್ನು ಸೇರಿಸಿಕೊಳ್ಳಬಹುದಾಗಿದ್ದು, ಈ ವರೆಗೆ ಗ್ರೂಪ್‌ಗಳಲ್ಲಿ 256 ಮಂದಿಯನ್ನು ಸೇರಿಸಲಷ್ಟೇ ಅವಕಾಶವಿತ್ತು. ಇದೀಗ ಈ ಸಂಖ್ಯೆಯನ್ನು ಗಣನೀಯವಾಗಿ ಏರಿಕೆ ಮಾಡಲಾಗುತ್ತಿದೆ. ವಾಟ್ಸಪ್‌ನ ಪ್ರತಿಸ್ಪರ್ಧಿಗಳಾದ ‘ಟೆಲಿಗ್ರಾಮ್’ ಮತ್ತು ‘ಡಿಸ್ಕಾರ್ಡ್‌’ನಲ್ಲಿ ಗ್ರೂಪ್‌ಗಳಿಗೆ ಸಾವಿರಾರು ಮಂದಿಯನ್ನು ಸೇರಿಸುವ ಅವಕಾಶವಿದೆ. ಹೀಗಾಗಿ ಇದೀಗ ವಾಟ್ಸಪ್ ಕೂಡ ತನ್ನ ಗ್ರೂಪ್ ಸದಸ್ಯರ ಸಂಖ್ಯೆಯ ಆಯ್ಕೆಯನ್ನು ಹೆಚ್ಚಿಸಿದೆ.

32 ಮಂದಿಗೆ ಒಂದೇ ಬಾರಿಗೆ ವಿಡಿಯೊ ಕರೆ ಮಾಡುವ ವಿಶೇಷತೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಸೇರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳಲ್ಲಿರುವಂತೆ ಪೋಲ್‌ (ಅಭಿಪ್ರಾಯ ಸಂಗ್ರಹಿಸುವ) ವ್ಯವಸ್ಥೆಯನ್ನೂ ಚಾಲ್ತಿಗೆ ತರಲಾಗುತ್ತಿದೆ.

Adding more features to WhatsApp